ಮೈಸೂರು: ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿ ಗಾಬರಿಯಾಗಿದೆ. ಆಂಜನೇಯನೇ ಬೇರೆ, ಬಜರಂಗದಳ ಸಂಘಟನೆ ಬೇರೆ. ಬಜರಂಗದಳ ಒಂದು ರಾಜಕೀಯ ಪಕ್ಷದ ವಿಭಾಗ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿಲ್ಲವೇ ? ಬಜರಂಗದಳ ಒಂದು ರಾಜಕೀಯ ಸಂಘಟನೆ ಭಾಗ. ಹನುಮಂತನ ಹೆಸರಿಟ್ಟುಕೊಂಡವರೆಲ್ಲ ಆಂಜನೇಯರಲ್ಲ. ಬಿಜೆಪಿಯವರು ದೇವರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವೂ ಕೂಡ ಆಂಜನೇಯನ ಭಕ್ತರೆ. ನಾವೂ ಕುಂಕುಮ, ನಾಮಗಳನ್ನು ಹಚ್ಚಿಕೊಳ್ಳುತ್ತೇವೆ. ರಾಜ್ಯದಲ್ಲಿ ಆಂಜನೇಯನ ಜನ್ಮಸ್ಥಳದ ಬಗ್ಗೆ ಸಾಕ್ಷಿ ಇದೆ. ಈ ಬಗ್ಗೆ ನಮಗೂ ಗೊತ್ತಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಆಂಜನೇಯ ದೇಗುಲಗಳ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಮಂಡಳಿ ಸ್ಥಾಪಿಸುತ್ತೇವೆ. ಯುವಕರಲ್ಲಿ ಆಂಜನೇಯ ಸಿದ್ಧಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮವನ್ನು ನಡೆಸುತ್ತೇವೆ. ಪ್ರತಿ ತಾಲೂಕಿನಲ್ಲಿ ಈ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದರು.
ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿದೆ. ಬಜರಂಗದಳ ನೈತಿಕ ಪೊಲೀಸ್ ಗಿರಿ ಮಾಡುತ್ತಿದೆ ಇಂತಹ ದಬ್ಬಾಳಿಕೆಗಳು ಸರಿಯಲ್ಲ ಎಂದು ಹೇಳಿದರು.