ಬೆಂಗಳೂರು: ಮಂಡ್ಯದಲ್ಲಿ ಟಿಪ್ಪು -ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ. ಇದು ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗ ಎಂದು ಸಚಿವ ಅಶ್ವತ್ಥನಾರಾಯಣ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಟಿಪ್ಪು ಹೊಡೆದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಿ ಎಂಬ ತಮ್ಮ ಹೇಳಿಕೆ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನನ್ನ ಮಾತಿನ ಹಿಂದೆ ಯಾವುದೇ ದುರುದ್ದೇಶವಿಲ್ಲ. ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗವಾಗಿದೆ. ನಾನು ಆಡಿರುವ ಮಾತುಗಳನ್ನು ಆ ಚೌಕಟ್ಟಿನಲ್ಲೇ ನೋಡಬೇಕು. ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.
ನಾನು ಯಾವುದೇ ವೈಯಕ್ತಿಕವಾದ ಧ್ವೇಷದಿಂದ ಅಮತನಾಡಿಲ್ಲ. ನನ್ನ ಮಾತನನ್ನು ಅವರು ವೈಯಕ್ತಿಕವಾಗಿ ತಿರುಚಿಕೊಳ್ಳುತ್ತಿದ್ದಾರೆ. ನನ್ನ ಮಾತಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದರು.
ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ ಗ್ರಾಮೀಣ ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ. ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ ಎಂದು ಹೇಳಿದ್ದಾರೆ.