ಕೇಂದ್ರ ಸರ್ಕಾರ ಸೋಮವಾರದಿಂದ ಕೆಲವೊಂದು ವಸ್ತುಗಳ ಮೇಲಿನ ಜಿ.ಎಸ್.ಟಿ. ಏರಿಕೆ ಮಾಡಿದ್ದು ಇದರ ಪರಿಣಾಮ ಹಾಲು, ಲಸ್ಸಿ ಮೊದಲಾದವುಗಳ ಬೆಲೆ ಏರಿಕೆಯಾಗಿದೆ. ಈಗಾಗಲೇ ಡೀಸೆಲ್, ಪೆಟ್ರೋಲ್ ಬೆಲೆಯಿಂದ ಹೈರಾಣಾಗಿರುವ ವಾಹನ ಮಾಲೀಕರು ಈ ದುಬಾರಿ ದುನಿಯಾದ ಮಧ್ಯೆ ಮತ್ತೊಂದು ಹೊರೆಯನ್ನು ಹೊರಬೇಕಾಗಿ ಬಂದಿದೆ.
ಹೌದು, ರಾಜ್ಯ ಸಾರಿಗೆ ಇಲಾಖೆ ವಾಹನಗಳ ವಾಯು ಮಾಲಿನ್ಯ ತಪಾಸಣೆ ದರವನ್ನು ಹೆಚ್ಚಳ ಮಾಡಿದ್ದು, ಇದರಿಂದಾಗಿ ವಾಹನ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ. ಒಮ್ಮೆ ವಾಯು ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಪಡೆದರೆ ಇದರ ಅವಧಿ ಆರು ತಿಂಗಳಾಗಿದ್ದು, ಒಂದೊಮ್ಮೆ ಮಾಡಿಸಿರದಿದ್ದರೆ ದುಬಾರಿ ದಂಡ ತೆರಬೇಕಾಗುತ್ತದೆ.
ಹೀಗೆ ಆರು ತಿಂಗಳಿಗೊಮ್ಮೆ ಮಾಡಿಸುವ ವಾಯು ಮಾಲಿನ್ಯ ಪ್ರಮಾಣ ಪತ್ರದ ಪರೀಕ್ಷೆಯ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ದ್ವಿಚಕ್ರಗಳಿಗೆ ಈ ಹಿಂದೆ 50 ರೂಪಾಯಿ ಪಡೆದುಕೊಳ್ಳುತ್ತಿದ್ದರೆ ಈಗ ಅದು 65 ರೂಪಾಯಿಗಳಾಗಿದೆ. ಹಾಗೆ ಪೆಟ್ರೋಲ್ ಕಾರಿಗೆ 90 ರೂ. ಗಳಿದ್ದ ದರ ಈಗ 115 ರೂಪಾಯಿಗಳಾಗಿದೆ. ಡೀಸೆಲ್ ಕಾರಿಗೆ 115 ರೂಪಾಯಿಗಳಿಂದ 160 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.