ನವದೆಹಲಿ: ಕರ್ನಾಟಕ ಸರ್ಕಾರ ದೇಶದಲ್ಲಿಯೇ ಅತಿ ಭ್ರಷ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಸಿಎಂ ಕಚೇರಿಯಿಂದಲೇ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸುರ್ಜೇವಾಲಾ, ದೀಪಾವಳಿ ಗಿಫ್ಟ್ ಜೊತೆ ಮುಖ್ಯಮಂತ್ರಿಗಳು ಪತ್ರಕರ್ತರಿಗೆ ಲಂಚ ನೀಡಿದ್ದಾರೆ. ಮಾಧ್ಯಮ ಮಿತ್ರರಿಗೂ ಲಂಚವನ್ನು ನೀಡುವ ಮೂಲಕ ಕರ್ನಾಟಕ ಸರ್ಕಾರ ಅತಿ ಭ್ರಷ್ಟ ಸರ್ಕಾರ ಎಂಬುದು ಗೊತ್ತಾಗಿದೆ. ಮಾಧ್ಯಮಗಳು ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದು ನಿರಂತರ ವರದಿ ಮಾಡುತ್ತಿವೆ. ಹಾಗಾಗಿ ಸರ್ಕಾರ ಒತ್ತಡಕ್ಕೆ ಸಿಲುಕಿದ್ದು, ಈಗ ಪತ್ರಕರ್ತರಿಗೆ ಲಂಚ ನೀಡಿದೆ. ಮೊದಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಲಂಚ ನೀಡದಿದ್ದರೆ ಯಾವುದೇ ಕೆಲಸಗಳು ಆಗಲ್ಲ. ಅನುದಾನಗಳನ್ನು ಪಡೆಯಲು ಸ್ವಾಮೀಜಿಗಳು ಸರ್ಕಾರಕ್ಕೆ ಕಮಿಷನ್ ಕೊಡಬೇಕಾದ ಸ್ಥಿತಿ ಇದೆ. ಪಿ ಎಸ್ ಐ ನೇಮಕಾತಿಗಾಗಿ 80 ಲಕ್ಷ ರೂಪಾಯಿ ಲಂಚ ಕೊಡಬೇಕಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಪೋಸ್ಟಿಂಗ್ ಗೂ 80 ಲಕ್ಷ ಲಂಚ ಕೊಡಬೇಕು. ಸಚಿವ ಎಂಟಿಬಿ ನಾಗರಾಜ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಕೇಸ್ ದಾಖಲಿಸಬೇಕು. ಸಿಎಂ ಸ್ಥಾನಕ್ಕೆ ಮೊದಲು ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.