ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ವಿರೋಧಿಗಳನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ನನ್ನ ಕುಟುಂಬಕ್ಕೆ ತನಿಖಾ ಸಂಸ್ಥೆಗಳಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ತೊಂದರೆ ಕೊಡಬೇಕು ಎಂಬುದೇ ಅವರ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ದಿನಬೆಳಗಾದರೆ ಒಂದಿಲ್ಲೊಂದು ನೋಟೀಸ್, ದಾಳಿ, ಕೋರ್ಟ್… ಐಟಿ, ಇಡಿ, ಸಿಬಿಐ ಎಲ್ಲಾ ತನಿಖಾ ಸಂಸ್ಥೆಗಳು ದೂರು ದಾಖಲಿಸಿಕೊಂಡು ದಾಳಿ ನಡೆಸುತ್ತಿವೆ. ತನಿಖಾ ಸಂಸ್ಥೆಗಳು ನಿರಂತರವಾಗಿ ಕಿರುಕುಳ ಕೊಡುತ್ತಿವೆ. ಏನ್ ಕಿರುಕುಳ ಕೊಡುತ್ತಾರೆ ಕೊಡಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲಾ ದಾಖಲೆಗಳು ಲೀಗಲ್ ಆಗಿವೆ ಭಯ ಪಡುವ ಅಗತ್ಯವಿಲ್ಲ ಎಂದರು.
40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಹೆದರಿಸಬೇಕು ಅಂತಾ ಹೆದರಿಸುತ್ತಿದ್ದಾರೆ. ಪ್ರತಿದಿನ ಒಂದಿಲ್ಲೊಂದು ನೋಟೀಸ್. ತೊಂದರೆ ಕೊಡಲೆಂದೇ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಯಾವ ದಾಳಿ ಬೇಕಾದ್ರೂ ಮಾಡಲಿ, ಯಾವುದಕ್ಕೂ ಹೆದರಲ್ಲ. ಎಲ್ಲವನ್ನೂ ಎದುರಿಸಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.