alex Certify BIG NEWS: ದಶಪಥ ಹೆದ್ದಾರಿ ಯಾರಿಗೆ ಉಪಯೋಗ……? ಅಸಲಿ ಅಂಶಗಳ ಪಟ್ಟಿ ಮಾಡಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಶಪಥ ಹೆದ್ದಾರಿ ಯಾರಿಗೆ ಉಪಯೋಗ……? ಅಸಲಿ ಅಂಶಗಳ ಪಟ್ಟಿ ಮಾಡಿದ HDK

ಬೆಂಗಳೂರು: ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ. ಸ್ಥಳೀಯರಿಗೆ ದಶಪಥದಿಂದ ಉಪಯೋಗ ಇದೆಯಾ ಎಂದು ಇನ್ನೂ ಒಳಹೊಕ್ಕು ಲೆಕ್ಕ ಹಾಕಿದರೆ, ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗೆ ಮಾತ್ರ ಲಾಭ. ಹಾಗಾದರೆ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದವರಿಗೆ ಉಪಯೋಗ ಇದೆಯಾ? ಎಳ್ಳಷ್ಟೂ ಇಲ್ಲ. ಈ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ ಎಂದು ತಿಳಿಸಿದ್ದಾರೆ.

ಕೆಲವರ ಪಾಲಿಗೆ ದೊಡ್ಡ ಎಟಿಎಂ ಆಗಿಬಿಟ್ಟ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯ ಅಸಲಿ ಅಂಶಗಳನ್ನು ಪಟ್ಟಿ ಮಾಡಿದರೆ ಕನ್ನಡಿಗರಿಗೆ ನಿರಾಶೆ, ನೋವು, ಹತಾಶೆ ಖಂಡಿತಾ. ಹಾಗಾದರೆ; ಕೆಳಗಿನ ಅಂಶಗಳನ್ನು ಗಮನಿಸೋಣ.

1. ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆ ಜನರಿಗೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವಾ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವಾ? ಎನ್ನುವುದು ನನ್ನ ಅನುಮಾನ.

2. ಮಧ್ಯಮ,ಸಣ್ಣಗಾತ್ರದ ಹೊಟೇಲು, ಸಣ್ಣ-ಅತಿಸಣ್ಣ ಉದ್ದಿಮೆ, ಕಬ್ಬುಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೆ ಎಳ್ಳುನೀರು ಬಿಡಲಾಗಿದೆ. 6000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದು, ಅವರ ಬದುಕಿನ ಮೇಲೆ‌ ಹೆದ್ದಾರಿ ಹೆಮ್ಮಾರಿ ಬಂದು ಕೂತಿದೆ.

3. ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಜೀವನಾಡಿಯೇ ಆಗಿದ್ದ ಹಳೆಯ ಹೆದ್ದಾರಿ ಲಕ್ಷಾಂತರ ಜನರ ಜೀವನಕ್ಕೆ ದಾರಿ ಆಗಿತ್ತು. ಹೊಸ ಹೆದ್ದಾರಿ ಕೆಲವರಿಗೆ ಹಣದ ದಾರಿಯಷ್ಟೆ. ಜನರ ಜೀವನೋಪಾಯದ ಸರಪಳಿಯನ್ನು ಎಕ್ಸ್ ಪ್ರೆಸ್ ಹೆದ್ದಾರಿ ಬಲಿ ತೆಗೆದುಕೊಂಡಿದೆ. ಅವರ ವೈಯಕ್ತಿಕ ಬದುಕಿಗೆ, ಆರ್ಥಿಕ ಶಕ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದು ಸತ್ಯ.

4. ಹಳೆಯ ಹೆದ್ದಾರಿ ಜತೆ ಹಾಸು ಹೊಕ್ಕಾಗಿದ್ದ ಜನರು, ಈಗ ತಮ್ಮ ಊರುಗಳಿಗೆ ತೆರಳಲು ಕನಿಷ್ಠ 10ರಿಂದ 25 ಕಿ.ಮೀ. ಸುತ್ತಿ ಬರಬೇಕಿದೆ. ಸ್ಥಳೀಯರಿಗೆ ಸುತ್ತುವ ಶಿಕ್ಷೆ ಯಾಕೆ? ಭೂಮಿ ಕಳೆದುಕೊಂಡ ಪುಣ್ಯಕ್ಕೆ ಅವರು ಬಳಸಿಬಳಿಸಿ ಬಸವಳಿದು ತಮ್ಮ ಹಳ್ಳಿಗಳಿಗೆ ಬರಬೇಕಾ? ಇದು ಯಾವ ಸೀಮೆಯ ನ್ಯಾಯ? ದಶಪಥ ಕಲ್ಪಿಸಿದ ದೌರ್ಭಾಗ್ಯ ಇದು.

5. ಬದುಕು ಕಸಿದುಕೊಂಡ ದಶಪಥದ ಲೋಕಾರ್ಪಣೆಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಂಡ್ಯ ಸೇರಿ ಹೆದ್ದಾರಿ ಉದ್ದಕ್ಕೂ ಜನರ ಆಕ್ರೋಶ ಆಸ್ಫೋಟಗೊಂಡಿದೆ, ಕಪ್ಪುಪಟ್ಟಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ಅದು ಬೇಡ ಎಂದು ವಿನಂತಿಸುತ್ತೇನೆ. ನ್ಯಾಯ ಕೇಳೋಣ, ಹಕ್ಕು ಪ್ರತಿಪಾದಿಸೋಣ. ಅವರಿಗೆ ಅಗೌರವ ತೋರಿಸುವುದು ಬೇಡ.

6. ಜನರಿಗೂ ಸಿಟ್ಟಿದೆ, ಅದು ಸಹಜ. ದ್ವಿಚಕ್ರ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನಿರಾಕರಿಸಿದ್ದು ಏಕೆ? ಇದು ಅವೈಜ್ಞಾನಿಕ ಮತ್ತು ಅಕ್ಷಮ್ಯ. ಷಟ್ಪಥದ (ಆರು ಪಥ) ಮುಖ್ಯ ಕಾರಿಡಾರಿನಲ್ಲಿ ಕೊನೆಯಪಕ್ಷ ಎರಡನ್ನಾದರೂ ದ್ವಿಚಕ್ರ ವಾಹನಗಳಿಗೆ ಮೀಸಲಿಡಬಾರದೇಕೆ? ಇದೇನು ಬಿಟ್ಟಿ ಉಪಕಾರವೇ? ಅಲ್ಲ, ಆ ಜನರ ಹಕ್ಕು. ಎಂದು ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...