ಬೆಂಗಳೂರು: ಹೋಟೆಲ್ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಂದೇಶ್ ಹೋಟೆಲ್ ಸಪ್ಲೈಯರ್ ಹಾಗೂ ಇನ್ನಿಬ್ಬರ ಮೇಲೂ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದೇ ದರ್ಶನ್ ಎಂದು ಹೇಳುವ ಮೂಲಕ ಹಲ್ಲೆ ನಡೆಸಿದ್ದರೆ ಸಾಬೀತುಪಡಿಸಲಿ ಎಂಬ ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದರು. ಲಾಕ್ ಡೌನ್ ಸಮಯದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಮೋಜು ಮಸ್ತಿಯಲ್ಲಿ ತೊಡಗಿದೆ. ಜೂನ್ 24 ಹಾಗೂ 25ರಂದು ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ನಡೆಸಿದ್ದಾರೆ. ರಾತ್ರಿ 3ಗಂಟೆ ವೇಳೆ ಗಲಾಟೆ ನಡೆದಿದೆ. ಈ ವೇಳೆ ನಟ ದರ್ಶನ್ ಹೋಟೆಲ್ ಸಪ್ಲೈಯರ್ ಗಂಗಾಧರ್ ಎಂಬ ಕನ್ನಡಿಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಆತನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ ಎಂದು ವಿವರಿಸಿದ್ದಾರೆ.
BIG NEWS: ದರ್ಶನ್ ಬೈದಿದ್ದು ನಿಜ; ಸಪ್ಲೈಯರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂದೇಶ್ ನಾಗರಾಜ್ ಪುತ್ರನ ಸ್ಪಷ್ಟನೆ
ಗಲಾಟೆಯಾದ ಮಾರನೆ ದಿನವೇ ಹೋಟೆಲ್ ಸಿಬ್ಬಂದಿಗಳು ಕೆಲಸ ಬಿಡಲು ಸಿದ್ಧರಿದ್ದರು ಆದರೆ ಸಂದೇಶ್ ನಾಗರಾಜ್ ಸೇರಿದಂತೆ ಎಲ್ಲರೂ ಸಿಬ್ಬಂದಿಗಳ ಮನವೊಲಿಕೆ ಮಾಡಿದ್ದಾರೆ. ಭಯದಿಂದ ಗಂಗಾಧರ್ ಕಾಂಪ್ರಮೈಸ್ ಆಗಿರಬಹುದು. ಸೆಲೆಬ್ರಿಟಿಯೆಂದು ಎಲ್ಲರೂ ದರ್ಶನ್ ಪರವಾಗಿ ಮಾತನಾಡುತ್ತಾ, ಬಡವರಿಗೆ, ದುಡಿಯುವ ಕೈಗಳಿಗೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಶ್ರೀರಂಗಪಟ್ಟಣದಲ್ಲಿರುವ ದರ್ಶನ್ ತೋಟದ ಮನೆಯ ಕಾವಲುಗಾರನನ್ನು ಥಳಿಸಿದ್ದಾರೆ. ಗೋಪಾಲ್ ಅರಸ್ ಎಂಬಾತನ ಮೇಲೆ ಜು.3ರಂದು ಸೋಷಿಯಲ್ಸ್ ನಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಗೋಪಾಲ್ ಕೋಮಾದಲ್ಲಿದ್ದಾನೆ. ಇನ್ನು ಅರುಣಾಕುಮಾರಿ ಪ್ರಕರಣ ನಡೆದಿದ್ದು ಮಾರ್ಚ್ 6ರಂದು ಆಕೆ ಯಾರೆಂದೆ ಗೊತ್ತಿಲ್ಲ ಎಂದು ದರ್ಶನ್ ಹೇಳಿದ್ದರು. ಬಳಿಕ ಆಕೆ ಮೈಸೂರಿನ ಫಾರ್ಮ್ ಹೌಸ್ ಗೂ ಹೋಗಿದ್ದಳು, ಸೋಷಿಯಲ್ಸ್ ಪಬ್ ಗೂ ಹೋಗಿ ಬಂದಿದ್ದಳು. ಗೊತ್ತಿಲ್ಲ ಎಂದ ಮೇಲೆ ಆಕೆಯನ್ನು ಕರೆಸಿಕೊಂಡಿದ್ದು ಯಾಕೆ? ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಕೆಗೆ ಬೆದರಿಕೆಯೊಡ್ಡುತ್ತಿರುವುದು ಯಾಕೆ? ದರ್ಶನ್ ಹಾಗೂ ಗ್ಯಾಂಗ್ ನವರ ಪಾಳೆಗಾರಿಕೆ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದರ್ಶನ್ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ ಆದರೆ ಸೆಲೆಬ್ರಿಟಿಗಳೆಂದು ಇಂತಹ ವರ್ತನೆಗಳನ್ನು ಮಾಡುವುದು ತಪ್ಪು. ಸಾಮಾಜಿಕ ಕಳಕಳಿಯಿಂದ ಹಾಗೂ ಬಡವರ ಮೇಲಿನ ದೌರ್ಜನ್ಯವನ್ನು ನಾನು ಪ್ರಶ್ನಿಸುತ್ತಿದ್ದೇನೆ. ಇಷ್ಟೆಲ್ಲ ಅನ್ಯಾಯಗಳು ನಡೆಯುತ್ತಿದ್ದರೂ ನೋಡುತ್ತಾ ಸುಮ್ಮನಿರಲಾಗದು. ತಪ್ಪನ್ನು ಮುಚ್ಚಿಡಲು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದಾರೆ. ಯಾವುದೇ ಹೋಟೆಲ್ ನಲ್ಲಿ 60 ದಿನಗಳ ಸಿಸಿ ಟಿವಿ ಕ್ಯಾಮರಾ ರೆಕಾರ್ಡ್ ಸಂಗ್ರಹವಿರಬೇಕು ಎಂಬ ನಿಯಮವಿದೆ. ತಾಜ್ ಹೋಟೆಲ್ ಮೇಲಿನ ದಾಳಿ ಬಳಿಕ ಸರ್ಕಾರವೇ ಮಾಡಿದ ನಿಯಮವಿದು. ಸಂದೇಶ್ ಹೋಟೆಲ್ ನಲ್ಲಿ 10 ದಿನದಲ್ಲಿ ಸಿಸಿ ಟಿವಿ ದೃಶ್ಯ ಡಿಲಿಟ್ ಆಗುತ್ತೆ ಎಂದು ಅವರು ಹೇಳುವುದಾದರೆ ನಿಯಮ ಉಲ್ಲಂಘನೆ ಮಾಡುವ ಮೂಲಕ ಸೆಲೆಬ್ರಿಟಿ ರಕ್ಷಣೆಗೆ ನಿಂತಿದ್ದಾರೆ ಎಂದರ್ಥ ಎಂದು ಗುಡುಗಿದ್ದಾರೆ.