ಮೈಸೂರು: ಹೋಟೇಲ್ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಂದೇಶ್ ಪ್ರಿನ್ಸ್ ಹೋಟೇಲ್ ಮಾಲೀಕ, ಸಂದೇಶ್ ನಾಗರಾಜ್ ಪುತ್ರ, ತಮ್ಮ ಹೋಟೆಲ್ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ನಡೆಸಿಲ್ಲ, ಆದರೆ ಬೈದಿದ್ದು, ಸಣ್ಣ ಗಲಾಟೆ ನಡೆದಿದ್ದು ನಿಜ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್ ಪುತ್ರ, ಈ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ಲಾಕ್ ಡೌನ್ ಗೂ ಮೊದಲು ನಡೆದ ಘಟನೆಯಿದು. ದರ್ಶನ್ ಹಾಗೂ ಅವರ ಸ್ನೇಹಿತರು ಅಂದು ಹೋಟೆಲ್ ಗೆ ಬಂದಿದ್ದರು. ರಾತ್ರಿ 12:30 ಸಮಯದಲ್ಲಿ ಸಣ್ಣ ಗಲಾಟೆಯಾಗಿದೆ. ಆದರೆ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ನಡೆಸಿಲ್ಲ. ಬೈದಿದ್ದಾರೆ ಅಷ್ಟೇ. ಗಲಾಟೆಯಾಗುತ್ತಿದ್ದಂತೆ ಸ್ವತಃ ನಾನೇ ಮಧ್ಯ ಪ್ರವೇಶ ಮಾಡಿ ಹೀಗೆಲ್ಲ ನಮ್ಮ ಸಿಬ್ಬಂದಿಗಳ ಮೇಲೆ ಬೈಯ್ಯುವಂತಿಲ್ಲ. ಗಲಾಟೆಯಾದರೆ ನಮ್ಮ ಹೋಟೆಲ್ ಗೂ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದೆ. ಹೋಟೆಲ್ ನಮ್ಮ ಹೊಟ್ಟೆಪಾಡು. ಇಲ್ಲಿನ ಕಾರ್ಮಿಕರೇ ನನಗೆ ಊಟ ಕೊಡುವವರು ಹೀಗಾಗಿ ನಾನು ಹೋಟೆಲ್ ಕಾರ್ಮಿಕರ ಪರವಾಗಿಯೇ ನಿಲ್ಲುತ್ತೇನೆ. ಗಲಾಟೆಯಾದಾಗ ನಾನೇ ದರ್ಶನ್ ಅವರಿಗೆ ರೂಮಿಗೆ ಹೋಗುವಂತೆ ಹೇಳಿ ಕಳುಹಿಸಿದ್ದೇನೆ. ಯಾವುದೇ ಹಲ್ಲೆಯಾಗಲಿ, ಪೊಲೀಸ್ ಕೇಸ್ ಆಗಲಿ ನಡೆದಿಲ್ಲ ಎಂದರು.
‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್
ಮಹಾರಾಷ್ಟ್ರದಿಂದ ಬಂದಿರುವ ಟ್ರೈನಿ ಮೇಲೆ ದರ್ಶನ್ ಬೈದಿದ್ದಾರೆ. ಪ್ರತಿಬಾರಿ ನನಗೂ ಹಾಗೂ ದರ್ಶನ್ ಅವರಿಗೂ ಗಲಾಟೆಯಾಗುವುದೇ ಜನರನ್ನು ಕರೆದುಕೊಂಡು ಬರುವ ವಿಚಾರವಾಗಿ. ಅವರು ಬರುವಾಗ 15-20 ಜನರನ್ನು ಕರೆತರುತ್ತಾರೆ. ಈ ಬಗ್ಗೆ ಹಿಂದೆಯೂ ನಾನು ಹೇಳಿದ್ದೆ. ದರ್ಶನ್ ಯಾರ ಮೇಲೂ ಕೈ ಎತ್ತಿಲ್ಲ. ಕೋಪದಲ್ಲಿ ಬೈದಿದ್ದಾರೆ. ನಾವು ಹೋಟೆಲ್ ನಡೆಸುತ್ತಿರುವವರು. ಹಾಗಾಗಿ ನಮಗೆ ಯಾರೇ ಬೈದರೂ ಸಹಿಸಿಕೊಳ್ಳಬೇಕು. ಕೆಲವೊಮ್ಮೆ ಕುಡಿದ ಮತ್ತಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತವೆ. ಆದರೂ ನಾವು ಸಹಿಸಿಕೊಂಡು ಹೋಗುತ್ತೇವೆ. ಅಂದು ನಾನೇ ದರ್ಶನ್ ಗೆ ತಿಳಿ ಹೇಳಿದ್ದೇನೆ. ಕಾರ್ಮಿಕರಿಗೂ ಅವರ ಪರವಾಗಿ ಕ್ಷಮೆ ಕೇಳಿದ್ದೇನೆ ಎಂದು ಹೇಳಿದರು.
ಇನ್ನು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದ್ದೇನೆ. ಯಾರ್ಯಾರೋ ಪಬ್ಲಿಸಿಟಿಗೋಸ್ಕರ ಏನೆಲ್ಲಾ ಆರೋಪ ಮಾಡಿಕೊಂಡು ಅವರ ಮರ್ಯಾದೆ ಅವರೇ ತೆಗೆದುಕೊಳ್ಳುತ್ತಿದ್ದಾರೆ. ಯಾವುದೇ ಸಾಲ ಪಡೆಯಬೇಕೆಂದರೂ ಖುದ್ದಾಗಿ ವ್ಯಕ್ತಿಯೇ ಹೋಗಿ ಸಹಿ ಹಾಕಬೇಕು ಹೊರತು ಬೇರೆ ಯಾರೋ ಅವರ ಪರವಾಗಿ ಮಾಡಿ ವಂಚಿಸಲಾಗದು ಎಂದು ಹೇಳಿದರು.