ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟದ ನಡುವೆ ರಸ್ತೆಗುಂಡಿಗಳ ಸಮಸ್ಯೆ ತೀವ್ರಗೊಂಡಿದ್ದು, ಜನರ ಜೀವ ತೆಗೆಯಲು ಬಾಯ್ತೆರೆದು ನಿಂತಂತಿವೆ. ರಸ್ತೆ ಗುಂಡಿ ಮುಚ್ಚಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ದಂಡ ವಸೂಲಿ ಮಾಡಲು ನಿಮ್ಮ ಬಳಿ ಸಿಬ್ಬಂದಿಗಳಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಸಿಬ್ಬಂದಿಗಳಿಲ್ವಾ ? ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ರಸ್ತೆಗಳ ಪರಿಸ್ಥಿತಿ ಹೀಗೇ ಆಗಿದೆ. ರಸ್ತೆ ತುಂಬೆಲ್ಲ ಗುಂಡಿಗಳಿವೆ. ರಸ್ತೆ ಗುಂಡಿ ಮುಚ್ಚೋದ್ರಲ್ಲೂ ಪರ್ಸಂಟೇಜ್ ನಡಿತಿದ್ಯಾ ? ಎಂದು ಪ್ರಶ್ನಿಸಿದ್ದಾರೆ.
ವಾಹನ ಸವಾರರಿಂದ ದಂಡ ವಸೂಲಿಗೆ ಸಿಬ್ಬಂದಿ ಇದ್ದಾರೆ. ಒಬ್ಬ ಎ ಎಸ್ ಐ ವಾಹನದಲ್ಲಿ ಕೂತಿರ್ತಾನೆ. ನಾಲ್ಕು ಜನ ಕಾನ್ಸ್ ಟೇಬಲ್ ಗಳನ್ನು ರಸ್ತೆಗಳಲ್ಲಿ ನಿಲ್ಲಿಸಿ ವಾಹನ ಸವಾರರಿಂದ ಆ ದಾಖಲೆ, ಈ ದಾಖಲೆ ಕೇಳುತ್ತಾ, ಇಲ್ಲಸಲ್ಲದ ದಂಡ ವಸೂಲಿ ಮಾಡ್ತಾರೆ. ಸಂಜೆ ಮೇಳೆ ವಸೂಲಿ ಮಾಡಿದ ಹಣ ಹಂಚಿಕೊಳ್ಳುತ್ತಾರೆ. ರಾಜಾರೋಷವಾಗಿ ಇಂತಹ ಕೆಲಸ ಮಾಡುತ್ತಿದ್ದರೂ ಅವರ ವಿರುದ್ಧ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿಲ್ಲ. ಇಂತಹ ದಂಡ ವಸೂಲಿಗೆ ಇವರ ಬಳಿ ಸಿಬ್ಬಂದಿ ಇದ್ದಾರೆ. ರಸ್ತೆ ಗುಂಡಿ ಮುಚ್ಚಲು ಸಿಬ್ಬಂದಿ ಇಲ್ಲ. ಸಾರ್ವಜನಿಕರು ಪ್ರತಿದಿನ ಜೀವ ಕೈಲಿ ಹಿಡಿದು ಓಡಾಡುತ್ತಿದ್ದಾರೆ ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದರೆ ಏನರ್ಥ? ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚಲು ಆಗಲ್ವಾ? ಎಂದು ಕಿಡಿಕಾರಿದ್ದಾರೆ.