ಹುಬ್ಬಳ್ಳಿ: 11 ವರ್ಷಗಳ ಹಿಂದೆ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಆರ್ ಪಿ ಎಫ್ ಯೋಧನಿಗೆ ಹುಬ್ಬಳ್ಳಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಯೋಧ ಶಂಕ್ರಪ್ಪ ಭಜಂತ್ರಿ 11 ವರ್ಷಗಳ ಹಿಂದೆ ಬಂದೂಕಿನಿಂದ ಗುಂಡಿಟ್ಟು ಮೂವರನ್ನು ಹತ್ಯೆಗೈದಿದ್ದ. ಪತಿ-ಪತ್ನಿ ನಡುವಿನ ಜಗಳ ಸೇಡಿನ ಹಾದಿ ಹಿಡಿದು ಒಂದೇ ಕುಟುಂಬದ ಮೂವರ ಕೊಲೆಯಲ್ಲಿ ಅಂತ್ಯವಾಗಿತ್ತು.
ಶಂಕ್ರಪ್ಪ ಭಜಂತ್ರಿ 2010ರಲ್ಲಿ ಗೀತಾ ಎಂಬುವವರನ್ನು ವಿವಾಹವಾಗಿದ್ದ. ಆದರೆ ಪತಿ-ಪತ್ನಿ ನಡುವೆ ಜಗಳವಾಗಿ ಬೇಸತ್ತ ಪತ್ನಿ ತವರುಮನೆ ಸೇರಿದ್ದಳು. ತಾಯಿ ಆಸ್ತಿಯೂ ಕೈತಪ್ಪಿ ಹೋಗಿತ್ತು. ಇದಕ್ಕೆಲ್ಲ ಸಂಬಂಧಿಕ ಯಲ್ಲಪ್ಪ ಭಜಂತ್ರಿ ಎಂಬಾತ ಕಾರಣ ಎಂದು ಹಗೆ ಸಾಧಿಸಲು ಆರಂಭಿಸಿದ್ದ. ಸೇಡು ತೀರಿಸಿಕೊಳ್ಳಲು ಯಲ್ಲಪ್ಪ ಭಜಂತ್ರಿ, ಸೋಮಪ್ಪ ಭಜಂತ್ರಿ ಹಾಗೂ 9 ವರ್ಷದ ಐಶ್ವರ್ಯ ಭಜಂತ್ರಿ ಎಂಬುವವರನ್ನು ಗುಂಡಿಟ್ಟು ಹತ್ಯೆಗೈದಿದ್ದ. ಪತ್ನಿ ಗೀತಾ ಗುಂಡೇಟಿನಿಂದ ಸ್ವಲ್ಪದರಲ್ಲಿ ಬಚಾವಾಗಿದ್ದಳು.
ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಅಪರಾಧಿ ಯೋಧ ಶಂಕ್ರಪ್ಪ ಭಜಂತ್ರಿಗೆ 24 ವರ್ಷ ಕಠಿಣ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ದಂಡ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ದೇವೇಂದ್ರಪ್ಪ ಆದೇಶ ಹೊರಡಿಸಿದ್ದಾರೆ.