ಮೈಸೂರು: ರಾಷ್ಟ್ರಧ್ವಜದ ಬಗ್ಗೆ ವಿವರಿಸಲು ಹೋಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಯಡವಟ್ಟು ಮಾಡಿಕೊಂಡಿದ್ದು, ಕೇಸರಿ, ಬಿಳಿ, ಹಸಿರು ಮಧ್ಯದಲ್ಲಿ ಅಶೋಕ ಚಕ್ರ ಎಂದು ಹೇಳುವ ಬದಲು ಕೆಂಪು, ಬಿಳಿ, ಹಸಿರು, ಮಧ್ಯದಲ್ಲಿ ಅಶೋಕ ಚಕ್ರ ಎಂದು ಹೇಳುವ ಮೂಲಕ ಮತ್ತೆ ಬಿಜೆಪಿ ನಾಯಕರ ವಾಗ್ದಾಳಿಗೆ ಗುರಿಯಾಗಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತ್ರಿವರ್ಣಧ್ವಜ ವಿವರಣೆಗೆ ಕಿಡಿಕಾರಿರುವ ಬಿಜೆಪಿ, ಕೇಸರಿ ಕಂಡರೆ ಉರಿದು ಬೀಳುವ ಸಿದ್ದರಾಮಯ್ಯನವರು ಈಗ ದೇಶದ ರಾಷ್ಟ್ರಧ್ವಜದಲ್ಲಿರುವ ವರ್ಣವನ್ನೇ ಬದಲಾಯಿಸಲು ಹೊರಟಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲವೇ? ಕೇಸರಿ ಕಂಡರೆ ಅಷ್ಟು ದ್ವೇಷ ಯಾಕೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರ ಭಾಷಣದ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡುವ ಮೂಲಕ ಸರಣಿ ಟ್ವೀಟ್ ನಲ್ಲಿ ಕಿಡಿಕಾರಿರುವ ಬಿಜೆಪಿ, ನಿದ್ರೆಯಲ್ಲಿಯೂ ಕೇಸರಿ ಬಣ್ಣವನ್ನು ದ್ವೇಷಿಸುವ ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ. ರಾಷ್ಟ್ರಧ್ವಜದಲ್ಲಿರುವ ಕೇಸರಿ ವರ್ಣದ ವಿರುದ್ಧದ ಇವರ ದ್ವೇಷವನ್ನು ದೇಶಭಕ್ತ ಬಂಧುಗಳು ಸಹಿಸುವುದಿಲ್ಲ ಎಂದು ಗುಡುಗಿದೆ.