ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತದ ಆರ್ಭಟ ಮುಂದುವರೆದಿದ್ದು, ಚಂಡಮಾರುತಕ್ಕೆ ರಾಜ್ಯದಲ್ಲಿ ಈವರೆಗೆ ನಾಲ್ವರು ಬಲಿಯಾಗಿದ್ದಾರೆ. 112 ಮನೆಗಳು ನೆಲಸಮವಾಗಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ್ದಾರೆ.
ತೌಕ್ತೆ ಚಂಡಮಾರುತದಿಂದ ಕಳೆದ 24 ಗಂಟೆಗಳಲ್ಲಿ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಉತ್ತರಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಕಡಲ ಅಬ್ಬರ ಮುಂದುವರೆದಿದೆ. 112 ಮನೆಗಳು ಹಾನಿಯಾಗಿವೆ. 139 ವಿದ್ಯುತ್ ಕಂಬಗಳು ಧರೆಗುರುಳಿದ್ದು, 22 ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿಯಾಗಿದೆ.
‘ತೌಕ್ತೆ’ ಚಂಡಮಾರುತ ಎಫೆಕ್ಟ್: ರಾಜ್ಯದ ಹಲವೆಡೆ ಮೇ 20 ರ ವರೆಗೆ ಭಾರಿ ಮಳೆ ಸಾಧ್ಯತೆ –ರೆಡ್, ಆರೆಂಜ್ ಅಲರ್ಟ್
ಕಡಲ ತೀರದಲ್ಲಿದ್ದ 318 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 11 ಪರಿಹಾರ ಕೇಂದ್ರಗಳಲ್ಲಿ 298 ಜನರಿಗೆ ಆಶ್ರಯ ನೀಡಲಾಗಿದೆ. ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಮೇ 18 ವರೆಗೆ ಭಾರಿ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕೂಡ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.