ಬೆಂಗಳೂರು: ತಾಕತ್ತಿದ್ದರೆ ಕಾಂಗ್ರೆಸ್ ಪಾದಯಾತ್ರೆ ತಡೆಯಲಿ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ನಾನು ಬೀದಿಯಲ್ಲಿ ಹೋಗಿ ಅವರೊಂದಿಗೆ ಕುಸ್ತಿ ಮಾಡಬೇಕೆ? ಡಿ.ಕೆ.ಶಿವಕುಮಾರ್ ನನಗಿಂತ ಕಿರಿಯರು ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಲಘುವಾಗಿ ಮಾತನಾಡುತ್ತಿದ್ದಾರೆ. ತೊಡೆ ತಟ್ಟೋದು, ಸವಾಲು ಹಾಕೋದು, ವೀರಾವೇಶದ ಮಾತನಾಡುವುದು ಮಾಡುತ್ತಿದ್ದಾರೆ. ಇದೆಲ್ಲವನ್ನೂ ಜನರು ನೋಡುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಅದು ಬಿಜೆಪಿಗೆ ಬೇರೆ, ಕಾಂಗ್ರೆಸ್ ಗೆ ಬೇರೆ, ಜೆಡಿಎಸ್ ಗೆ ಬೇರೆ ಕಾನೂನು ಇಲ್ಲ. ರಾಜ್ಯದಲ್ಲಿ ಕೊರೊನಾ, ಒಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಸ್ಥಿತಿ ಗಂಭೀರತೆ ಅರಿತು ತಾಳ್ಮೆಯಿಂದ ಯೋಚನೆ ಮಾಡಲಿ. ಇಂಥ ಸಂದರ್ಭದಲ್ಲಿ ರಾಜಕೀಯ ಹೋರಾಟ ಸರಿಯಲ್ಲ ಎಂದರು.
ಯಾರನ್ನೂ ತಡೆಗಟ್ಟಬೇಕು ಎಂಬ ಉದ್ದೇಶ ಸರ್ಕಾರಕ್ಕಿಲ್ಲ. ಕಾಂಗ್ರೆಸ್ ನಾಯಕರು ಕೂಡ ಸರ್ಕಾರ ನಡೆಸಿದವರೇ ಅನುಭವಸ್ಥರೇ. ಈಗ ಪಾದಯಾತ್ರೆ ಮಾಡುವುದನ್ನು ಬಿಟ್ಟು ಜವಾಬ್ದಾರಿಯಿಂದ ವರ್ತಿಸಲಿ. ಕೋವಿಡ್ ಎರಡನೇ ಅಲೆಯಲ್ಲಿ ಸ್ಮಶಾನದಲ್ಲಿ ಶವಗಳು ಕ್ಯೂ ನಿಲ್ಲುವ ಸ್ಥಿತಿ ಬಂತು. ಮೂರನೇ ಅಲೆಯ ಈ ಸಂದರ್ಭದಲ್ಲಿ ಮತ್ತೆ ಪರಿಸ್ಥಿತಿ ಕೈಮೀರಬಾರದು ಎಂಬುದು ನಮ್ಮ ಉದ್ದೇಶ. ಕಾಂಗ್ರೆಸ್ ನಾಯಕರು ಪಾದಯಾತ್ರೆ ನಿರ್ಧಾರ ಬಿಟ್ಟು, ಸರ್ಕಾರದ ನಿಯಮ ಪಾಲಿಸಲಿ ಎಂದು ಹೇಳಿದರು.