ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಈ ಬೆಳವಣಿಗಳ ನಡುವೆ ಸಂಸದ ತೇಜಸ್ವಿ ಸೂರ್ಯ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಕೂಡ ರಾಜಿನಾಮೆ ನೀಡಿದ್ದು, ಸಾಮೂಹಿಕ ರಾಜೀನಾಮೆ ಪರ್ವದ ಬಗ್ಗೆ ತಿಳಿಯುತ್ತಿದ್ದಂತೆ ಸಂದೀಪ್ ಅವರಿಗೆ ಕರೆ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಕಾರ್ಯಕರ್ತರ ಆಕ್ರೋಶದ ನೋವು ಅರ್ಥವಾಗುತ್ತೆ. ನಿಮಗೆಷ್ಟು ಸಿಟ್ಟು, ಆಕ್ರೋಶವಿದೆಯೋ ನಮಗೂ ಅಷ್ಟೇ ಇದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು. ಆದರೆ ನಮ್ಮದೇ ಸರ್ಕಾರ ಇದೆ. ಏನು ಮಾಡೋದು…? ಎಂದು ಹೇಳಿದ್ದಾರೆ.
ಎಲ್ಲಾ ಜಿಲ್ಲಾಧ್ಯಕ್ಷರು ಸೇರಿ ಸಿಎಂ ಭೇಟಿಯಾಗಿ ಮಾತನಾಡೋಣ. ರಾಜೀನಾಮೆ ವಾಪಸ್ ಪಡೆಯಿರಿ. ನಾನು ನಾಲ್ಕು ಲೈನ್ ಟೈಪ್ ಮಾಡಿ ಕಳುಹಿಸುತ್ತೇನೆ ಅದನ್ನು ಗ್ರೂಪ್ ಗೆ ಹಾಕಿ ಎಂದಿದ್ದಾರೆ. ತೇಜಸ್ವಿ ಸೂರ್ಯ ಅವರದ್ದು ಎನ್ನಲಾದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.