ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ವಿತರಣೆಗಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಲವು ರಾಜ್ಯಗಳ ಬಳಿ ಅಕ್ಕಿ ಬೇಡಿಕೆ ಇಟ್ಟಿದ್ದು, ಆದರೆ ಯಾವುದೇ ರಾಜ್ಯದಿಂದ ಅಕ್ಕಿ ಸಿಗುವ ಲಕ್ಷಣಗಳು ಕಂಡುಬರುತ್ತಿಲ್ಲ.
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಬಳಿ ಮಾತುಕತೆ ಬಳಿಕ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾಹಿತಿ ನೀಡಿದ್ದು, ತೆಲಂಗಾಣದಿಂದ ಅಕ್ಕಿ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಶಕ್ತಿಭವನದಲ್ಲಿ ಸಚಿವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತೆಲಂಗಾಣದಿಂದ ಅಕ್ಕಿ ಸಿಗುವುದಿಲ್ಲ ಎಂದು ಸಿಎಂ ಕೆಸಿಆರ್ ತಿಳಿಸಿದ್ದಾರೆ. ಹಾಗಾಗಿ ಆಂಧ್ರ ಪ್ರದೇಶ ಸರ್ಕಾರದ ಜೊತೆ ಚರ್ಚಿಸುವಂತೆ ಸಿಎಸ್ ಗೆ ತಿಳಿಸಲಾಗಿದೆ ಎಂದರು.
ಛತ್ತೀಸ್ ಗಢ ಸರ್ಕಾರ 1.5 ಲಕ್ಷ ಟನ್ ಅಕ್ಕಿ ಕೊಡುವುದಾಗಿ ತಿಳಿಸಿದೆ. ಆದರೆ ದರ ಸ್ವಲ್ಪ ದುಬಾರಿ. ಸಾಗಣೆ ವೆಚ್ಚವೂ ಹೆಚ್ಚಾಗಲಿದೆ. ಎಷ್ಟೇ ಕಷ್ಟವಾದರೂ ಸರಿ ರಾಜ್ಯದ ಜನತೆಗೆ ಕೊಟ್ಟ ಭರವಸೆಯಂತೆ ಉಚಿತ ಅಕ್ಕಿ ವಿತರಿಸುವುದಾಗಿ ತಿಳಿಸಿದರು.