ನವದೆಹಲಿ: ಸಧ್ಯದ ಆದಾಯ ತೆರಿಗೆ ಪದ್ಧತಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡದಿರುವುದು, ತೆರಿಗೆದಾರರಿಗೆ ನಿರಾಸೆಯಾಗಿದೆ.
ಈ ಬಾರಿ ತೆರಿಗೆ ಪದ್ಧತಿಯಲ್ಲಿ ಕೆಲ ವಿನಾಯ್ತಿ ನಿರೀಕ್ಷಿಸಿದ್ದ ತೆರಿಗೆದಾರರಿಗೆ ನಿರಾಸೆಯಾಗಿದೆ. ಆದರೆ ಆದಾಯ ತೆರಿಗೆಗೆ ಈಬಾರಿ ಯಾವುದೇ ಹೊಸ ಸೆಸ್ ಅಥವಾ ಸರ್ ಚಾರ್ಜ್ ಸೇರಿಲ್ಲ ಎಂಬುದು ಸಮಾಧಾನಕರ ಸಂಗತಿ.
ಪ್ರಸ್ತುತ ಆದಾಯ ತೆರಿಗೆ ಪಾವತಿಗಾಗಿ ಇರುವ ಹೊಸ ಪದ್ಧತಿ ಹಾಗೂ ಹಳೆ ಪದ್ಧತಿ ಎಂಬ ಎರಡೂ ವಿಧಾನಗಳು ಮುಂದುವರೆದಿದ್ದು, ಆದಾಯ ತೆರಿಗೆ ಪದ್ಧತಿಯಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರಸ್ತುತ ಆದಾಯ ತೆರಿಗೆಯ ವಿನಾಯಿತಿಯ ಮೂಲ ಮಿತಿ 2.5 ಲಕ್ಷದವರೆಗಿನ ಆದಾಯಕ್ಕೆ ಎರಡೂ ಪದ್ಧತಿಗಳಲ್ಲಿ ಸಂಪೂರ್ಣ ವಿನಾಯಿತಿ ಇದೆ. 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಎರಡೂ ಪದ್ಧತಿಗಳಲ್ಲಿ ಶೇ. 5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. 5 ಲಕ್ಷದಿಂದ 7.5 ಲಕ್ಷದವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಡಿ ಶೇ 20ರಷ್ಟು ಆದಾಯ ತೆರಿಗೆ ವಿಧಿಲಾಗುತ್ತಿದೆ. ಹೊಸ ಪದ್ಧತಿಯಡಿ ಶೇ 10 ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ. 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇ 15ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದ್ದು, ಈ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.