ಬೆಂಗಳೂರು: ಜೆಡಿಎಸ್ ನ ಹಲವು ಶಾಸಕರು ಕಾಂಗ್ರೆಸ್ ನತ್ತ ಮುಖ ಮಾಡಿರುವ ಬೆನ್ನಲ್ಲೇ ಇದೀಗ ಮಾಜಿ ಶಾಸಕ, ಜೆಡಿಎಸ್ ಹಿರಿಯ ಮುಖಂಡ ವೈ.ಎಸ್.ವಿ ದತ್ತಾ ಕೂಡ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರಾ? ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಸ್ವತಃ ವೈ.ಎಸ್.ವಿ ದತ್ತಾ ಪ್ರತಿಕ್ರಿಯೆ ನೀಡಿದ್ದಾರೆ.
ವೈ.ಎಸ್.ವಿ ದತ್ತಾ ಅವರಿಗೆ ಬೆಂಬಲಿಗರಿಂದ ಕಾಂಗ್ರೆಸ್ ಸೇರುವಂತೆ ಒತ್ತಡಗಳು ಹೆಚ್ಚುತ್ತಿವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಧ್ಯಕ್ಕೆ ಮೌನವೇ ನನ್ನ ಉತ್ತರ ಎಂದು ಹೇಳಿದ್ದಾರೆ.
40 ವರ್ಷಗಳಿಂದ ನಾನು ಜೆಡಿಎಸ್ ನಲ್ಲಿ ಇರಲು ಕಾರಣ, ರಾಷ್ಟ್ರೀಯ ಪಕ್ಷಕ್ಕಿಂತ ಪ್ರಾದೇಶಿಕ ಪಕ್ಷ ಯಾವುದಕ್ಕೂ ಕಮ್ಮಿಯಿಲ್ಲ. ಸಾಮಾಜಿಕ ನ್ಯಾಯ, ಜಾತ್ಯಾತೀತ ನಿಲುವಿಗೆ ಪಕ್ಷ ಬದ್ಧವಾಗಿದೆ ಎಂದು. ಆದರೆ ಬರ ಬರುತ್ತಾ ಎಲ್ಲಿಯೋ ಒಂದು ಕಡೆ ಈ ನಿಲುವನ್ನು ಪಕ್ಷದ ನಾಯಕರು ಕಳೆದುಕೊಳ್ಳುತ್ತಿದ್ದಾರೆ ಎಂಬ ನೋವು ನನಗೆ ಮಾತ್ರವಲ್ಲ ಮತದಾರರಿಗೂ ಕಾಡುತ್ತಿದೆ. ಜೆಡಿಎಸ್ ನಾಯಕರ ನಡೆ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬೆಂಬಲಿಗರ ಅಭಿಪ್ರಾಯ ತಪ್ಪು, ಸರಿ ಅಂತ ನಾನು ಹೇಳಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಈಗಲೇ ನಾನು ಏನನ್ನೂ ಹೇಳಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತಾ ತೆನೆ ಇಳಿಸಿ ಕೈ ಹಿಡಿಯಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.