ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಮತ್ತೊಂದು ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಸಲುವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನಿರಂತರ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿದ್ದಾರೆ.
ಕಳೆದ ತಿಂಗಳು ಬೆಂಗಳೂರಿಗೆ ಆಗಮಿಸಿ, ಜೆಡಿಎಸ್ ನಾಯಕರನ್ನು ಭೇಟಿಯಾಗಿ ಚಂದ್ರಶೇಖರ ರಾವ್ ಮಾತುಕತೆ ನಡೆಸಿದ್ದರು. ಇದೀಗ ಇದರ ಮುಂದುವರೆದ ಭಾಗವೆಂಬಂತೆ ಹೈದರಾಬಾದಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯದಶಮಿ ವೇಳೆಗೆ ರಾಷ್ಟ್ರಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಕುರಿತಂತೆ ಉಭಯ ನಾಯಕರ ನಡುವೆ ಈ ಹಿಂದೆ ಚರ್ಚೆ ನಡೆದಿದ್ದು, ಇದೀಗ ಈ ಕುರಿತ ರೂಪುರೇಷೆಗಳನ್ನು ಇಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ. ಅಲ್ಲದೆ ಬಿಜೆಪಿ ಹೊರತುಪಡಿಸಿದ ಮತ್ತಷ್ಟು ಪಕ್ಷಗಳ ನಾಯಕರನ್ನು ಹೊಸ ರಂಗಕ್ಕೆ ಆಹ್ವಾನಿಸುವ ಕುರಿತಂತೆ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ.