ಮಂಡ್ಯ: ವರುಣಾರ್ಭಟಕ್ಕೆ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿ ತೀರಕ್ಕೆ ಹೋಗದಂತೆ ಜಿಲ್ಲಾಡಳಿತಗಳು, ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ ಬೇಜವಾಬ್ದಾರಿ ಮೆರೆಯುತ್ತಿರುವ ಯುವಕರು ನದಿಯಲ್ಲಿ ಹುಚ್ಚಾಟ ಆಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತದ್ದೇ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ತುಂಬಿ ಹರಿಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ಮೂವರು ಯುವಕರು ಹೆಜ್ಜಿಗೆ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ನದಿ ನೀರಿನಲ್ಲಿ ಈಜಾಡಿ ಹುಚ್ಚಾಟ ಮೆರೆದಿದ್ದಾರೆ. ಈ ವೇಳೆ ಓರ್ವ ಯುವಕ ನೋಡ ನೋಡುತ್ತಿದ್ದಂತೆ ನದಿಯ ಸೆಳೆತಕ್ಕೆ ಸಿಲುಕಿ ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ಆತನ ಜತೆಗೆ ಈಜಲು ಹೋಗಿದ್ದ ಇಬ್ಬರು ಯುವಕರು ಕಷ್ಟಪಟ್ಟು ಈಜಿ ದಡ ಸೇರಿದ್ದಾರೆ. ಅಹಮದ್ ಕರಿಂ ಎಂಬ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.