ಕೊಪ್ಪಳ: ಕರಾವಳಿ, ಮಲೆನಾಡು ಭಾಗದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಉತ್ತರದ ಹಲವು ಜಿಲ್ಲೆಗಳು ತತ್ತರಿಸಿವೆ. ಭಾರಿ ಮಳೆಯಿಂದಾಗಿ ಜಲಾಶಯಗಳು ತುಂಬಿ ಹರಿಯುತ್ತಿವೆ. ಈ ನಡುವೆ ತುಂಗಭದ್ರಾ ಡ್ಯಾಂ ನೀಂದ ನೀರು ಬಿಡುಗಡೆ ಮಾಡಲಾಗಿದ್ದು, ಹಂಪಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ತುಂಗಭದ್ರಾ ಜಲಾಶಯದಿಂದ ನದಿಗೆ ಸುಮಾರು 70,000 ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ಇದರಿಂದಾಗಿ ಕೊಪ್ಪಳ ಜಿಲ್ಲೆಯ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಪ್ರಮುಖವಾಗಿ ಜಿಲ್ಲೆಯ ಆನೆಗೊಂದಿ ಬಳಿ ಇರುವ ಶ್ರೀಕೃಷ್ಣದೇವರಾಯ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಹಂಪಿಯಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳು ಬಹುತೇಕ ಜಲಾವೃತಗೊಂಡಿವೆ.
ಡ್ಯಾಂ ನಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.