ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಯುವಕರಿಂದ ಪ್ರತಿಭಟನೆ ವ್ಯಕ್ತವಾಗಿದೆ. ಬಿಹಾರ, ಉತ್ತರಪ್ರದೇಶ, ತೆಲಂಗಾಣದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಸಿಕಂದರಾಬಾದ್ ನಲ್ಲಿ ಓರ್ವ ಬಲಿಯಾಗಿದ್ದಾನೆ.
ಪ್ರತಿಭಟನಾಕಾರರು ರೈಲ್ವೆ ನಿಲ್ದಾಣಗಳನ್ನು ಮತ್ತು ಸಾರ್ವಜನಿಕ ಸ್ವತ್ತುಗಳನ್ನು ಗುರಿಯಾಗಿಸಿಕೊಂಡಿದ್ದು, ರೈಲು, ವಾಹನ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆಯ ಪರಿಣಾಮ ಈಗಾಗಲೇ 200 ರೈಲುಗಳನ್ನು ರದ್ದುಪಡಿಸಲಾಗಿದೆ. ಏಳು ರೈಲುಗಳು ಅಗ್ನಿಗಾಹುತಿಯಾಗಿವೆ.
ಇದರ ಮಧ್ಯೆ ತೀವ್ರ ಪ್ರತಿಭಟನೆಯ ನಡುವೆಯೂ ಅಗ್ನಿಪಥ ಯೋಜನೆಯಡಿ ನೇಮಕಾತಿಗೆ ವಾಯುಪಡೆ ಮುಂದಾಗಿದೆ. ಜೂನ್ 24ರಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ವಾಯುಪಡೆ ಮುಖ್ಯಸ್ಥ ವಿ.ಆರ್. ಚೌಧರಿ ತಿಳಿಸಿದ್ದಾರೆ. ಅಲ್ಲದೆ, ಗರಿಷ್ಠ ವಯೋಮಿತಿಯನ್ನು ಈಗ 21 ವರ್ಷದಿಂದ 23 ವರ್ಷಗಳಿಗೆ ಹೆಚ್ಚಳ ಮಾಡಲಾಗಿದ್ದು ಹೆಚ್ಚಿನ ಯುವಕರಿಗೆ ಅವಕಾಶ ಸಿಗಲಿದೆ ಎಂದು ಅವರು ಹೇಳಿದ್ದಾರೆ.