ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಅನಗತ್ಯವಾಗಿ ನಮ್ಮ ಕುಟುಂಬದ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ರೋಹಿಣಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದೇ ಇಲ್ಲ, ಆಕೆಗೆ ಯಾವುದೇ ಪ್ರಚಾರವೂ ಬೇಕಿಲ್ಲ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಧೀರ್ ರೆಡ್ಡಿ, ಡಿ.ರೂಪಾ ಅನ್ನೋರು ಯಾರು? ರೋಹಿಣಿಗೆ ಯಾವುದೇ ಪ್ರಚಾರ ಬೇಡ. ನಾನು ಹುಟ್ಟಿದ್ದು ಇಲ್ಲೇ. ನಾನು ಕನ್ನಡಿಗ. ಆಂಧ್ರದಲ್ಲಿ ನಮ್ಮ ಸಂಬಂಧಿಗಳು ಯಾರೂ ಇಲ್ಲ. ನಮ್ಮ ತಂದೆ ಕಾಲದಿಂದಲೂ ರಿಯಲ್ ಎಸ್ಟೇಟ್ ಮಾಡುತ್ತಿದ್ದೆವು. ಹಣಕಾಸಿನ ವಿಚಾರದಲ್ಲಿಯೂ ನಾವು ಚೆನ್ನಾಗಿಯೇ ಇದ್ದೇವೆ. ನಾನು ಸಾಫ್ಟ್ ವೇರ್ ಇಂಜಿನಿಯರ್. ಅನಗತ್ಯವಾಗಿ ನಮ್ಮ ಕುಟುಂಬದ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ರೂಪಾ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಗುಡುಗಿದ್ದಾರೆ.
ರೋಹಿಣಿ ಸಿಂಧೂರಿ ಯಾವ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ? ಹೆಸರು ಬಹಿರಂಗಪಡಿಸಲಿ. ಅವರು ವೈರಲ್ ಮಾಡಿರುವ ಫೋಟೋಗಳು ಯಾವುದು ಈಗಿನದಲ್ಲ. ಆ ಫೋಟೋಗಳನ್ನು ಅವರು ಹ್ಯಾಕ್ ಮಾಡಿ ತೆಗೆದುಕೊಂಡಿರಬಹುದು. ರೋಹಿಣಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದೂ ಇಲ್ಲ ಎಂದರು.
ಇನ್ನು ಡಿ.ಕೆ.ರವಿ ವಿಚಾರವಾಗಿ ರೋಹಿಣಿ ಮೇಲೆ ರೂಪಾ ಗಂಭೀರ ಆರೋಪ ಮಾಡುತ್ತಿದ್ದಾರೆ ಇದು ಸರಿಯಲ್ಲ. ಮೃತ ವ್ಯಕ್ತಿಯ ಬಗ್ಗೆ ಮಾತನಾಡುವುದು ಸೂಕ್ತವಲ್ಲ, ಈ ಹಿಂದೆಯೇ ಅವರ ಸಾವಿನ ಬಗ್ಗೆ ವರದಿಗಳು ಬಂದಿವೆ. ಹೀಗಿರುವಾಗ ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ. ಸತ್ತಿರುವ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಗರಂ ಆಗಿದ್ದಾರೆ.