ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಮತ ಎಣಿಕೆ ಕಾರ್ಯ ಇಂದು ನಡೆದಿದೆ. ಈ ಬಾರಿಯ ಫಲಿತಾಂಶದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಮತದಾರ ತನ್ನ ತೀರ್ಪು ನೀಡಿದ್ದಾನೆ ಎಂದು ಎಲ್ಲರೂ ವಿಶ್ಲೇಷಿಸುತ್ತಿದ್ದಾರೆ.
ಜೂನ್ 1 ರಂದು 7ನೇ ಹಂತದ ಮತದಾನ ಪೂರ್ಣಗೊಂಡ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳಲಾಗಿತ್ತು.
ಆದರೆ ಮತ ಎಣಿಕೆ ಸಂದರ್ಭದಲ್ಲಿ ಮತದಾರ ಬೇರೆಯದ್ದೇ ಆದ ರೀತಿಯ ತೀರ್ಪನ್ನು ನೀಡಿರುವುದು ಕಂಡು ಬರುತ್ತಿದೆ. ಎನ್ ಡಿ ಎ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವೆ ದೊಡ್ಡ ಹಣಾಹಣಿಯೇ ನಡೆದಿದೆ. ಸದ್ಯದ ಮಟ್ಟಿಗೆ NDA ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿರುವಂತೆ ಕಂಡು ಬರುತ್ತಿದೆಯಾದರೂ ಅಂತಿಮ ಹಂತದ ಫಲಿತಾಂಶ ಪ್ರಕಟಗೊಂಡ ಬಳಿಕ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.