ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ‘ಮಹಾ ವಿಕಾಸ ಅಘಾಡಿ’ ಸರ್ಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿದೆ. ಅಸ್ಸಾಂ ನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರು ತಮ್ಮ ಪಟ್ಟನ್ನು ಸಡಿಲಿಸದಿರುವ ಕಾರಣ ಮಾತುಕತೆ ನಡೆಸಬೇಕೆಂಬ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ದೇಶ ನೆರವೇರುವ ಸಾಧ್ಯತೆ ಇಲ್ಲ.
ಇದರ ಮಧ್ಯೆ ಶಿವಸೇನೆ – ಕಾಂಗ್ರೆಸ್ – ಎನ್.ಸಿ.ಪಿ. ಮೈತ್ರಿಕೂಟದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಬಹುಮತ ಇಲ್ಲವೆಂಬುದನ್ನು ಮನಗಂಡಿರುವ ಹಿರಿಯ ನಾಯಕ ಶರದ್ ಪವಾರ್, ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ ಮುಜುಗರಕ್ಕೀಡಾಗುವುದಕ್ಕಿಂತ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಲೇಸು ಎಂದು ಉದ್ಧವ್ ಠಾಕ್ರೆ ಅವರಿಗೆ ಸಲಹೆ ನೀಡಿದ್ದಾರೆನ್ನಲಾಗಿದ್ದು, ಹೀಗಾಗಿ ಶೀಘ್ರದಲ್ಲೇ ಉದ್ಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೆ ಸರ್ಕಾರ ವಚನಗೊಳ್ಳುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸಚಿವರುಗಳು ತಮ್ಮ ತಮ್ಮ ಇಲಾಖೆಗಳಿಂದ ಸಾವಿರಾರು ಕೋಟಿ ಮೌಲ್ಯದ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಪ್ರತಿಪಕ್ಷ ಬಿಜೆಪಿ, ಈ ಆದೇಶಗಳಿಗೆ ತಡೆ ಹಿಡಿಯಬೇಕೆಂದು ಕೋರಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಮನವಿ ಸಲ್ಲಿಸಿದೆ. ಇದರ ಮಧ್ಯೆ ಅಂತಿಮ ಆಟಕ್ಕೆ ತಯಾರಾಗಿರುವ ಶಿವಸೇನೆ ನಾಯಕರು, ಬಂಡಾಯ ಎದ್ದಿರುವವರ ಪೈಕಿ ಕೆಲ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಡೆಪ್ಯೂಟಿ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.