ಬೆಂಗಳೂರು: ಲಂಚ- ಮಂಚದ ಸರ್ಕಾರ ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ “ತಮ್ಮ ಮನೆಯ ಹೆಂಚು ತೂತು” ಎಂಬುದೇ ಗೊತ್ತಿಲ್ಲ. ಇವರು ಆರೋಪ ಮಾಡಿದ ಬೆನ್ನಲ್ಲೆ ಜಯಮಾಲಾ ಅವರ ಲಂಚದ ಹಗರಣ ಬಯಲಾಗಿದೆ. ಹಾಗಾದರೆ ಲಂಚದ ಸರ್ಕಾರ ಯಾರದ್ದು? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಪ್ರಿಯಾಂಕ್ ಖರ್ಗೆ ಅವರೇ, ಸಹಾಯ ಮಾಡುವುದಾಗಿ ನಂಬಿಸಿ ಅಸಹಾಯಕ ಹೆಣ್ಣೊಬ್ಬಳ ಮೇಲೆ ಮೇಟಿ ಲೈಂಗಿಕ ದೌರ್ಜನ್ಯ ಎಸಗಿದ್ದು ನಿಮ್ಮ ಕಾಲದಲ್ಲೇ ಅಲ್ಲವೇ? ಯುಪಿಎ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದ ಕಾಂಗ್ರೆಸ್ ನಾಯಕರುಗಳು ಮಹಿಳೆಯರ ಮೇಲೆ ನಡೆಸಿದ ’ದಿಗ್ವಿಜಯ’, ’ಅಭಿಷೇಕ’ ಗಳ ಸಿಡಿ ನಿಮ್ಮ ಮಂಚದ ಸರ್ಕಾರದ ಫಲವಲ್ಲವೇ? ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.
ಸಾವಿರಾರು ಮಹಿಳೆಯರು, ಪ್ರತಿಭಾವಂತರು, ವಿದ್ಯಾವಂತರು ಕಷ್ಟಪಟ್ಟು, ಅನೇಕ ಪರೀಕ್ಷೆಗಳನ್ನು ಉತ್ತೀರ್ಣರಾಗಿ, ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಈ ಮಾತುಗಳು, ಅಷ್ಟು ಜನ ಮಹಿಳೆಯರಿಗೆ ಅವಮಾನ ಮಾಡಿದಂತಲ್ಲವೇ? ಕೂಡಲೇ ಕ್ಷಮೆ ಯಾಚಿಸಿ ಎಂದು ಆಗ್ರಹಿಸಿದೆ.