ಬೆಂಗಳೂರು: ಬಿಜೆಪಿ ನಾಯಕರು ಓಡಾಡುವ ರಸ್ತೆಯಲ್ಲಿ ಮಾತ್ರ ರಸ್ತೆಗುಂಡಿ ಮುಚ್ಚಿದ್ದಾರೆ. ಪ್ರಧಾನಿ ಮೋದಿ ಕಣ್ಣುಕಟ್ಟುವ ಕೆಲಸ ಮಾಡುತ್ತಿದ್ದಾರೆ ರಾಜ್ಯ ನಾಯಕರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಗುತ್ತಿಗೆದಾರರು ಲಂಚಾವತಾರ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಮತ್ತೊಬ್ಬ ಗುತ್ತಿಗೆದಾರರು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ದಯಾಮರಣಕ್ಕೆ ಅರ್ಜಿ ಹಾಕಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಹಲವರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ ಆದರೂ ಉತ್ತರ ಕೊಟ್ಟಿಲ್ಲ. ಈಗ ರಾಜ್ಯದಲ್ಲಿ ವಿಪಕ್ಷದಲ್ಲಿರುವ ನಾವು ಪ್ರಧಾನಿಯವರಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೇವೆ. ವಿಪಕ್ಷದವರ ಪ್ರಶ್ನೆಗೆ ಪ್ರಜಾಪ್ರಭುತ್ವದಲ್ಲಿ ಉತ್ತರ ಕೊಡಲೇಬೇಕು. ಪ್ರಧಾನಿಯವರು ಏನು ಉತ್ತರ ಕೊಡುತ್ತಾರೆ ನೋಡೋಣ ಎಂದರು.
ಇದೇ ವೇಳೆ ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಮಾತ್ರ ರಸ್ತೆಗುಂಡಿ ಮುಚ್ಚಿರುವ ಬಿಬಿಎಂಪಿ ಕೆಲಸಕ್ಕೆ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಜನರು ಓಡಾಡುವ ರಸ್ತೆಯನ್ನು ಮುಚ್ಚಿ ಜನರಿಗೆ ಉಪಯೋಗವಾಗುವಂತೆ ಸರ್ಕಾರ ಮಾಡಿಲ್ಲ. ತಮ್ಮ ನಾಯಕರು ಓಡಾಡುವ ರಸ್ತೆಯಲ್ಲಿನ ಗುಂಡಿ ಮಾತ್ರ ಮುಚ್ಚಿದ್ದಾರೆ ಅಷ್ಟೇ. ಇದರಿಂದ ಜನರಿಗೆ ಆಗುವ ಸಮಸ್ಯೆ ಕಡಿಮೆಯಾಗುತ್ತಾ? ಯಾರಿಗೆ ಕಣ್ಕಟ್ಟು ಮಾಡ್ತಿದ್ದಾರೆ ಇವರು? ಇವರ ಕಾರ್ಯವೈಖರಿಗೆ ನಾಳೆಯಿಂದ ಸಾರ್ವಜನಿಕರು, ಕಾರ್ಯಕರ್ತರು ಗುಂಡಿಗಳಿಗೆ ಹೋಮ-ಹವನ ಶುರುಮಾಡ್ತಾರೆ ನೋಡ್ತಾ ಇರಿ ಎಂದು ವಾಗ್ದಾಳಿ ನಡೆಸಿದರು.