ಕಲಬುರ್ಗಿ: ತಾನು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ಶಿಕ್ಷಕಿಯನ್ನು ನೇಮಕ ಮಾಡಿದ ಅರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಕಲಬುರ್ಗಿಯ ಚಿತ್ತಾಪುರ ತಾಲೂಕಿನ ಭಾಲಿಯಲ್ಲಿ ನಡೆದಿದೆ.
ಇಲ್ಲಿನ ಭಾಲಿ ನಾಯಕ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕೊಲ್ಲೂರ್ ಅಮಾನತುಗೊಂಡಿರುವ ಶಿಕ್ಷಕ. ಶಿಕ್ಷಕ ಮಹೇಂದ್ರ ತಾನು ಕರ್ತವ್ಯಕ್ಕೆ ಶಾಲೆಗೆ ಹಾಜರಾಗಿ ಪಾಠ ಮಾಡದೇ ತನ್ನ ಬದಲಾಗಿ ಬೇರೊಬ್ಬ ಮಹಿಳೆಯನ್ನು ಬಾಡಿಗೆ ಶಿಕ್ಷಕಿಯನ್ನಾಗಿ ನೇಮಿಸಿ ಮಕ್ಕಳಿಗೆ ಪಾಠ ಮಾಡಿಸುತ್ತಿದ್ದ ಎಂಬ ಅರೋಪ ಕೇಳಿಬಂದಿತ್ತು.
ಶಾಲೆಯಲ್ಲಿ 1-5ನೇ ತರಗತಿವರೆಗೆ ಇದ್ದು, ಶಾಲೆಯಲ್ಲಿ ಒಟ್ಟು 18 ವಿದ್ಯಾರ್ಥಿಗಳಿದ್ದರು. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಇಬ್ಬರು ಶಿಕ್ಷಕರಿದ್ದು ಅವರಲ್ಲಿ ಮಹೇಂದ್ರ ಕೂಡ ಒಬ್ಬರು. ಮಹೇಂದ್ರ ಕೊಲ್ಲೂರ್ ತಾನು ಶಾಲೆಗೆ ಬರದೇ ತನ್ನ ಬದಲಾಗಿ ಪದವಿ ಪಡೆದಿರುವ ಓರ್ವ ಮಹಿಳೆಯನ್ನು ನೇಮಿಸಿ ಆಕೆಗೆ 6 ಸಾವಿರ ಹಣಕೊಟ್ಟು ಮಕ್ಕಳಿಗೆ ಪಾಠ ಮಾಡಿಸುತ್ತಿದ್ದ. ಇದರಿಂದ ಶಿಕ್ಷಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ, ಮಹೇಂದ್ರ ಕೊಲ್ಲೂರ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.