ಎಲ್ಲೆಂದರಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳಿಗೆ ಯುವ ಜನತೆ ಬಲಿಯಾಗುತ್ತಿರುವುದರ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ತಂಬಾಕು ಉತ್ಪನ್ನ ಮಾರಾಟ ಮಾಡುವವರು ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಪ್ರತ್ಯೇಕ ಲೈಸನ್ಸ್ ಪಡೆಯಬೇಕಾಗಿದ್ದು, 500 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಒಂದೊಮ್ಮೆ ಪ್ರತ್ಯೇಕ ಲೈಸನ್ಸ್ ಪಡೆಯದೇ ಮಾರಾಟ ಮಾಡುವವರಿಗೆ ಭಾರಿ ದಂಡ ವಿಧಿಸಲಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಲೈಸೆನ್ಸ್ ಪಡೆಯದೆ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ 5000 ರೂಪಾಯಿ ದಂಡ ವಿಧಿಸಲು ನಿಯಮ ರೂಪಿಸಲಾಗಿದ್ದು ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ದಂಡದ ಪ್ರಮಾಣ 4000 ರೂಪಾಯಿ ಆಗಿದೆ. ಒಂದೊಮ್ಮೆ ದಂಡ ವಿಧಿಸಿದ ಬಳಿಕವೂ ಲೈಸೆನ್ಸ್ ಪಡೆಯದಿದ್ದರೆ ಪ್ರತಿನಿತ್ಯ ನೂರು ರೂಪಾಯಿ ಕಟ್ಟಬೇಕಾಗುತ್ತದೆ.