ಶಿವಮೊಗ್ಗ: ತಂದೆ ಹಾಗೂ ಮಗ ಇಬ್ಬರಿಗೂ ಕಾಂಟ್ರ್ಯಾಕ್ಟರ್ ಓರ್ವರು ಚಾಕುವಿನಿಂದ ಇರಿದಿದ್ದು, ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾರ್ಡ್ ವೇರ್ ಉದ್ಯಮಿ ದಯಾನಂದ ಹಾಗೂ ಅವರ ಮಗ ರಾಘವೇಂದ್ರ ಎಂಬುವವರಿಗೆ ಕಾಂಟ್ರ್ಯಾಕ್ಟರ್ ಕೋಟೇಶಪ್ಪ ಎಂಬಾತ ಮನ ಬಂದಂತೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದಯಾನಂದ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು ಮಗ ರಾಘವೇಂದ್ರ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ದಯಾನಂದ್ ಶಿರಾಳಕೊಪ್ಪದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಕಾಮಗಾರಿ ಜವಾಬ್ದಾರಿಯನ್ನು ಕಾಂಟ್ರ್ಯಾಕ್ಟರ್ ಕೋಟೇಶಪ್ಪನಿಗೆ ನೀಡಿದ್ದರು. ಆದರೆ ಕೋಟೇಶಪ್ಪ ಸರಿಯಾಗಿ ಕಾಮಗಾರಿ ನಿರ್ವಹಿಸದ ಹಿನ್ನೆಲೆಯಲ್ಲಿ ವ್ಯವಹಾರ ಸರಿ ಬಾರದೇ ದಯಾನಂದ್, ಬೇರೆಯವರಿಗೆ ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿದ್ದರು. ಇದರಿಂದ ಕೋಟೇಶಪ್ಪ, ದಯಾನಂದ್ ವಿರುದ್ಧ ಕೋಪಗೊಂಡಿದ್ದ ಎನ್ನಲಾಗಿದೆ.
ಬೆಳಿಗ್ಗೆ ದಯಾನಂದ್ ಹಾಗೂ ಅವರ ಮಗ ಹಾರ್ಡ್ ವೇರ್ ಅಂಗಡಿ ತೆಗೆಯುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿದ ಕೋಟೇಶಪ್ಪ, ದಯಾನಂದ್ ಹಾಗೂ ಅವರ ಮಗ ರಾಘವೇಂದ್ರ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ದಯಾನಂದ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಯಾಳು ರಾಘವೇಂದ್ರ ಆಸ್ಪತ್ರೆಗೆ ದಾಖಲಾಗಿದ್ದು, ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.