ಹುಬ್ಬಳ್ಳಿ: ನಾವೆಲ್ಲರೂ ಆಜಾದಿ ಕಾ ಅಮೃತ್ ಮಹೋತ್ಸವ ಕಾಲ ಘಟ್ಟದಲ್ಲಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಕನಸು ನಾವೆಲ್ಲರೂ ನನಸು ಮಾಡಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಬ್ರಿಟಿಷರ ವಿರುದ್ಧ ಲಾಲ್, ಬಾಲ್, ಪಾಲ್ ಮೂವರು ಯುವಕರು ಹೋರಾಟ ನಡೆಸಿದ್ದರು. ಇಂದು ಲಾಲ್ ಲಜಪತರಾಯ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮದಿನ. ದೇಶಕ್ಕಾಗಿ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಆಜಾದಿಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮೊದಲ ಸ್ಥಾನಕ್ಕೆ ತಲುಪುವ ಸಂಕಲ್ಪವಾಗಬೇಕು ಎಂದು ಹೇಳಿದರು.
ಯುವಕರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಬೇಕು. ಯಾರು ಸಾಹಸದಿಂದ ಮುನ್ನುಗ್ಗುತ್ತಾರೆ ಅವರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಿದರು.
2014ರಲ್ಲಿ ದೇಶದಲ್ಲಿ ಮಹತ್ವದ ಬದಲಾವಣೆಯಾಯಿತು. ಕೇವಲ 8 ವರ್ಷಗಳಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಿದೆ. ಇಂದು ದೇಶದಲ್ಲಿ 17,000 ಸ್ಟಾರ್ಟ್ ಅಪ್ ಗಳು ಸ್ಥಾಪನೆಯಾಗಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಬಹುತೇಕ ವಸ್ತುಗಳು ಇಂದು ದೇಶದಲ್ಲಿಯೇ ಉತ್ಪಾದನೆಯಾಗುತ್ತಿದೆ. ಮೋದಿ ಸರ್ಕಾರ ಬಂದ ಬಳಿಕ 41,000 ಹೊಸ ಕಾಲೇಜುಗಳ ಸ್ಥಾಪನೆಯಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲವಾಗಲೆಂದು ಎಫ್ ಎಸ್ ಎಲ್ ಸ್ಥಾಪಿಸುತ್ತಿದ್ದೇವೆ. ಇಡಿ ವಿಶ್ವಕ್ಕೆ ಭಾರತದ ಶಕ್ತಿಯನ್ನು ತೋರಿಸಬೇಕಿದೆ ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದೆ ಎಂದರು.