ನಾಲ್ಕು ವರ್ಷದಷ್ಟು ಹಳೆದ ಡ್ರಗ್ಸ್ ಪ್ರಕರಣವೊಂದರಲ್ಲಿ ಜನಪ್ರಿಯ ನಟರಾದ ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಹಾಗೂ ಇನ್ನಿತರ 10 ನಟರನ್ನು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ರಾಕುಲ್ ಪ್ರೀತ್‌ಗೆ ಸೆಪ್ಟೆಂಬರ್ 6ರಂದು, ಬಾಹುಬಲಿ ನಟ ರಾಣಾ ದಗ್ಗುಬಾಟಿ ಸೆಪ್ಟೆಂಬರ್ 8ರಂದು, ತೆಲುಗಿನ ಇನ್ನಿತರ ನಟರಾದ ರವಿತೇಜ (ಸೆಪ್ಟೆಂಬರ್ 9) ಹಾಗೂ ನಿದೇರ್ಶಕ ಪೂರಿ ಜಗನ್ನಾಥ್‌ರನ್ನು ಸೆಪ್ಟೆಂಬರ್ 31ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ.
ತೆಲಂಗಾಣ ಅಬಕಾರಿ ಹಾಗೂ ಮಾದಕ ವಸ್ತು ನಿಷೇಧ ಇಲಾಖೆಯು 2017ರಲ್ಲಿ 30 ಲಕ್ಷ ರೂ ಮೌಲ್ಯದ ಮಾದಕ ದ್ರವ್ಯ ವಶಕ್ಕೆ ಪಡೆದ ಬಳಿಕ 12 ಪ್ರಕರಣಗಳನ್ನು ದಾಖಲಿಸಿತ್ತು. 11 ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ.
ಇದಾದ ಬಳಿಕ ಸಾರ್ವಜನಿಕ ಹಣ ದುರ್ಬಳಕೆಯ ಕೋನದಲ್ಲೂ ತನಿಖೆ ದಾರಿ ಹಿಡಿದ ಬಳಿಕ ಜಾರಿ ನಿರ್ದೇಶನಾಲಯವೂ ಸಹ ತನಿಖೆ ಆರಂಭಿಸಿದೆ.
ಪ್ರಕರಣ ಸಂಬಂಧ ಇದುವರೆಗೂ 30 ಮಂದಿಯನ್ನು ಬಂಧಿಸಲಾಗಿದ್ದು, 62 ಮಂದಿಯನ್ನು ಪ್ರಶ್ನಿಸಲಾಗಿದೆ. ಇವರಲ್ಲಿ 11 ಮಂದಿ ಚಿತ್ರರಂಗಕ್ಕೆ ಸಂಬಂಧಪಟ್ಟವರಾಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಹೈದರಾಬಾದ್‌ನಲ್ಲಿ ದೊಡ್ಡ ಮಟ್ಟದಲ್ಲಿ ಮಾದಕ ದ್ರವ್ಯದ ಕಾಂಡ ಜರುಗಿದೆ. ಜುಲೈ 2017ರಲ್ಲಿ ಸರಣಿ ರೇಡ್‌ಗಳ ಮೂಲಕ ಭಾರೀ ಪ್ರಮಾಣದ ಎಲ್‌ಎಸ್‌ಡಿ ಹಾಗೂ ಕೊಕೇಯ್ನ್‌ಅನ್ನು ವಶಕ್ಕೆ ಪಡೆದ ಕಾನೂನು ಪಾಲನಾ ಪಡೆಗಳು 13 ಮಂದಿಯನ್ನು ಬಂಧಿಸಿದ್ದರು.
ಈ ಮಾದಕ ದ್ರವ್ಯದ ಬಳಕೆದಾರರಲ್ಲಿ ಶಾಲೆ ಮತ್ತು ಕಾಲೇಜುಗಳ ವಿಧ್ಯಾರ್ಥಿಗಳೂ ಸಹ ಸೇರಿದ್ದು, 26 ಶಾಲೆಗಳು ಹಾಗೂ 27 ಕಾಲೇಜುಗಳ ವಿದ್ಯಾರ್ಥಿಗಳ ಹೆತ್ತವರಿಗೆ ಈ ಸಂಬಂಧ ವಿಚಾರ ತಿಳಿಸಲಾಗಿದೆ.
ಬಂಧಿತರು ಗೋವಾ, ಹೈದರಾಬಾದ್, ಮುಂಬಯಿ, ಪುಣೆ, ದೆಹಲಿಗಳಲ್ಲಿ ಆಯೋಜಿಸುವ ರೇವ್ ಪಾರ್ಟಿಗಳಿಗೆ ದೊಡ್ಡ ಮಟ್ಟದಲ್ಲಿ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದವರು ಎನ್ನಲಾಗಿದೆ. ಬಂಧಿತ ಡೀಲರ್‌ಗಳೆಲ್ಲಾ ಸುಶಿಕ್ಷಿತರಾಗಿದ್ದು, ಅಗ್ರ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಆರು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಆಗಿದ್ದಾರೆ.