ಬೆಂಗಳೂರು: ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೊದಲ ದಿನದಿಂದಲೂ ಸ್ಪಷ್ಟವಾಗುತ್ತಿದೆ. ಸ್ಪಷ್ಟ ಬಹುಮತವಿದ್ದರೂ ಸಿಎಂ ಆಯ್ಕೆ ಮಾಡುವಾಗ ನಡೆಸಿದ ಸರ್ಕಸ್, ಸಿಕ್ರೆಟ್ ಬ್ಯಾಲೆಟ್ ಬಳಕೆ ಮಾಡಿರುವಿದು ಇದೆಲ್ಲವನ್ನೂ ಗಮನಿಸಿದರೆ ಅರ್ಥವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯಿಂದ ಆಗಿರುವ ಡ್ಯಾಮೆಜ್ ಕಂಟ್ರೋಲ್ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಂಗಪುರ ಕಾರ್ಯತಂತ್ರದ ಕಥೆ ಕಟ್ಟಿದ್ದಾರೆ. ಈ ಮೂಲಕ ಮುಂದೆ ತಾವೇ ಮಾಡುವ ಕಾರ್ಯತಂತ್ರದ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆಯೇ ಭಿನ್ನಾಭಿಪ್ರಾಯ ಇದೆ. ಇದು ಹಲವು ಬಾರಿ ಬಹಿರಂಗವಾಗಿದೆ. ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಆಲೋಚಿಸಿಲ್ಲ. ಆದರೆ ಸರ್ಕಾರದಲ್ಲಿರುವ ಶಾಸಕರೇ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವ ಸಲುವಾಗಿ ಅಭಿವೃದ್ಧಿಗೆ ಅನುದಾನ ಇಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಶಾಸಕರೇ ಈ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದಾರೆ. ಈಗ ಸಚಿವರುಗಳ ವಿರುದ್ದ ಶಾಸಕರು ಅಸಮಾಧಾನ ಹೊರ ಹಾಕಿ ಪತ್ರ ಬರೆದಿದ್ದಾರೆ. ಒಟ್ಟಾರೆ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.