ಮೈಸೂರು: ಕೆ.ಆರ್.ಎಸ್.ಡ್ಯಾಂ ಪರಿಶೀಲನೆ ಬಳಿಕ ಅಧಿಕಾರಿಗಳ ಸಭೆ ನಡೆಸಿ, ಸುದ್ದಿಗೋಷ್ಠಿ ನಡೆಸಿದ ಸಂಸದೆ ಸುಮಲತಾ, ಕೆ.ಆರ್.ಎಸ್. ಡ್ಯಾಂ ನಲ್ಲಿ ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿದ್ದಕ್ಕೆ ಗ್ರೌಟಿಂಗ್ ಮೂಲಕ ಮುಚ್ಚಲಾಗಿದೆ ಎಂದು ಹೇಳಿದ್ದಾರೆ.
ಡ್ಯಾಂ ಸುತಮುತ್ತ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದ್ದರೂ ಅಧಿಕಾರಿಗಳು ಸುಮ್ಮನಿರುವುದು ನಿರ್ಲಕ್ಷ್ಯವಲ್ಲದೇ ಮತ್ತಿನ್ನೇನು? ಅಕ್ರಮ ಗಣಿಗಾರಿಕೆ, ಸ್ಟೋನ್ ಬ್ಲಾಸ್ಟಿಂಗ್ ನಿಂದಾಗಿ ಜಲಾಶಯಕ್ಕೆ ಅಪಾಯವಿದೆ. ಈಗಾಗಲೇ ಸಣ್ಣಪುಟ್ಟ ಬಿರುಕು ಬಿಟ್ಟಿದ್ದಕ್ಕೆ ಗ್ರೌಟಿಂಗ್ ಮೂಲಕ ಮುಚ್ಚಲಾಗಿದೆ. 67 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆದಿದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಾನು ಧ್ವನಿ ಎತ್ತಿದ್ದಕ್ಕೆ ವಾಸ್ತವಾಂಶ ಇಂದು ಬಯಲಾಗಿದೆ. ಬಿರುಕು ಇರುವುದು ಸ್ಪಷ್ಟ. ಸಧ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ತಾತ್ಸಾರ ಮಾಡಿದರೆ ಒಂದು ವೇಳೆ ಸಮಸ್ಯೆಯಾದರೆ ಹೊಣೆ ಹೊರುವವರು ಯಾರು? ಸ್ವತ: ಆ ಭಾಗದ ರೈತರು ಕೂಡ ಗಣಿಗಾರಿಕೆ ನಡೆಯುತ್ತಿರುವುದರಿಂದ ಜಲಾಶಯಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆ.ಆರ್.ಎಸ್.ನಂತಹ ಜಲಾಶಯವನ್ನು ಮತ್ತೆ ಕಟ್ಟಲು ಸಾಧ್ಯವೇ? ಇಂತಹ ಆಸ್ತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಮಹಾರಾಜರ ತ್ಯಾಗದ ಫಲವಾಗಿ, 10 ಸಾವಿರ ಜನರನ್ನು ಬಳಸಿ ಡ್ಯಾಂ ನಿರ್ಮಿಸಲಾಗಿದೆ. ನನ್ನ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುತ್ತಿರುವುದು ಯಾಕೆ? ಡ್ಯಾಂ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ವಿಚಾರದಲ್ಲಿ ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಕೆ.ಆರ್.ಎಸ್ ನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು. ಈ ಬಗ್ಗೆ ಗಣಿ ಮತ್ತು ಭೂ ವಿಜ್ನಾನ ಇಲಾಖೆ ಕ್ರಮ ಕೈಗೊಳ್ಳಬೇಕು. ಕೆ.ಆರ್.ಎಸ್. ಡ್ಯಾಂ ವಿಚಾರದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು ಎಂದು ಆಗ್ರಹಿಸಿದರು.