ಆನ್ ಲೈನ್ ಸುದ್ದಿ ಸಂಗ್ರಾಹಕ ಸಂಸ್ಥೆ ಡೈಲಿಹಂಟ್ ಮತ್ತು ಕಿರು-ವೀಡಿಯೋ ಪ್ಲಾಟ್‌ಫಾರ್ಮ್ ಜೋಶ್‌ನ ಮೂಲ ಸಂಸ್ಥೆಯಾದ ವರ್ಸೆ ಇನ್ನೋವೇಶನ್, ಕೆನಡಾ ಪೆನ್ಷನ್ ಪ್ಲಾನ್ ಇನ್ವೆಸ್ಟ್ ಮೆಂಟ್ ಬೋರ್ಡ್ (ಸಿಪಿಪಿಐಬಿ) ನೇತೃತ್ವದ ಫಂಡಿಂಗ್ ನಲ್ಲಿ 805 ಮಿಲಿಯನ್ ಡಾಲರ್ ಸಂಗ್ರಹಿಸಿದೆ.
ಹೊಸ ಹೂಡಿಕೆದಾರರಾದ ಒಂಟಾರಿಯೋ ಟೀಚರ್ಸ್ ಪೆನ್ಷನ್ ಫಂಡ್, ಲಕ್ಸೋರ್ ಕ್ಯಾಪಿಟಲ್, ಸುಮೇರು ವೆಂಚರ್ಸ್ ಮತ್ತದರ ಬೆಂಬಲಿತ ಸಂಸ್ಥೆಗಳಾದ ಸೋಫಿನಾ ಗ್ರೂಪ್, ಬೈಲ್ಲಿ ಜಿಫೋರ್ಡ್ ಕೂಡ ಈ ಸುತ್ತಿನಲ್ಲಿ ಪಾಲ್ಗೊಂಡಿದ್ದವು. ಈ ಫಂಡಿಂಗ್ ನೆರವಿನಿಂದ ಬೆಂಗಳೂರು ಮೂಲದ ಡೈಲಿ ಹಂಟ್ ಮೌಲ್ಯ 5 ಬಿಲಿಯನ್ ಡಾಲರ್ ಗೆ ತಲುಪಿದೆ.
ಕಂಪನಿಯ ಒಟ್ಟಾರೆ ಬಂಡವಾಳದಲ್ಲಿ ಅರ್ಧದಷ್ಟನ್ನು ಅಂದರೆ 425 ಮಿಲಿಯನ್ ಡಾಲರ್ ಹಣವನ್ನು CPPIB ಹೂಡಿಕೆ ಮಾಡಿದೆ. 2007ರಲ್ಲಿ Newshunt ಪೋರ್ಟಲ್‌ನೊಂದಿಗೆ ಡೈಲಿ ಹಂಟ್ ಕಾರ್ಯಾರಂಭ ಮಾಡಿತ್ತು. ಗೂಗಲ್ ಮತ್ತು ಮೈಕ್ರೋಸಾಫ್ಟ್ ಹೂಡಿಕೆ ಬಳಿಕ ಕಳೆದ ಆಗಸ್ಟ್ ನಲ್ಲಿ 450 ಮಿಲಿಯನ್ ಡಾಲರ್ ಫಂಡಿಂಗ್ ಪಡೆದಿದ್ದ ವರ್ಸೆ ಇನ್ನೊವೇಶನ್ ಮೌಲ್ಯ 3 ಬಿಲಿಯನ್ ಡಾಲರ್ ಗೆ ತಲುಪಿತ್ತು.
ಕಳೆದ ಒಂದು ವರ್ಷದಲ್ಲಿ ಕಂಪನಿ 1.5 ಬಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಕಂಪನಿಯಲ್ಲಿ ತಿಂಗಳಿಗೆ 150 ಮಿಲಿಯನ್ ಆಕ್ಟಿವ್ ಬಳಕೆದಾರರಿದ್ದಾರೆ. ಸುಮಾರು 350 ಮಿಲಿಯನ್ ಬಳಕೆದಾರರಿಗೆ ಡೈಲಿ ಹಂಟ್ ಸೇವೆ ಒದಗಿಸ್ತಾ ಇದೆ. ಸಹ ಸಂಸ್ಥಾಪಕರಾದ ವಿರೇಂದ್ರ ಗುಪ್ತಾ ಹಾಗೂ ಉಮಂಗ್ ಬೇಡಿ ಮಾತನಾಡಿ, ಈ ರೀತಿಯ ಹೂಡಿಕೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
“ಇದು ಭಾರತೀಯ ಇಂಟರ್ನೆಟ್ ಕಂಪನಿಯಲ್ಲಿ ಸಿಪಿಪಿಐಬಿ ಮಾಡಿದ ಅತಿದೊಡ್ಡ ಹೂಡಿಕೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಕಂಪನಿಗಳು ಹಣವನ್ನು ಸಂಗ್ರಹಿಸಲು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಈ ರೀತಿ ಬೆಂಬಲ ದೊರೆತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹೊಸ ಬಂಡವಾಳವನ್ನು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಡೇಟಾ ವಿಜ್ಞಾನದ ಸಾಮರ್ಥ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಡೇಲಿ ಹಂಟ್ ವೇದಿಕೆಯಲ್ಲಿ ಎಲ್ಲಾ ಭಾಷೆಗಳಲ್ಲೂ ವೆಬ್ 3.0 ಪ್ರಯೋಜನಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗ್ತಿದೆ.
ಖ್ಯಾತ ಇ-ಕಾಮರ್ಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಸಹ ಸಂಸ್ಥೆ ಮುಂದಾಗಿದೆ. ಕಿರು ವೀಡಿಯೊಗಳಿಗಾಗಿ ಹಣಗಳಿಕೆಯ ಮಾದರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿರುವುದಾಗಿ ಬೇಡಿ ತಿಳಿಸಿದ್ದಾರೆ.
“ಇದು ಶಾಪಿಂಗ್ ಮಾಡಬಹುದಾದ ವಾಣಿಜ್ಯ ಅನುಭವ, ಪ್ರಭಾವಶಾಲಿ ವಾಣಿಜ್ಯ, ಲೈವ್ ಕಾಮರ್ಸ್ ಮತ್ತು ಪ್ರಭಾವಿಗಳಿಗೆ ಹೊಚ್ಚ ಹೊಸ Web3.0 ಪ್ಲಾಟ್‌ಫಾರ್ಮ್ ಅನುಭವವನ್ನು ವಿಸ್ತರಿಸುತ್ತದೆ, ಪ್ರೇಕ್ಷಕರಿಂದ ಹಣಗಳಿಸಲು ಅವರಿಗೆ ಸಹಾಯ ಮಾಡುತ್ತದೆ, ಇಲ್ಲಿ ಮಾತ್ರವಲ್ಲದೆ ಅದನ್ನು ಜಾಗತಿಕವಾಗಿಯೂ ವಿಸ್ತರಿಸಲು ಉತ್ಸುಕರಾಗಿದ್ದೇವೆ ಅಂತಾ ಬೇಡಿ ಹೇಳಿದ್ರು.
ಕಂಪನಿಯು ಮುಂಬರುವ ವಾರಗಳಲ್ಲಿ ಔಪಚಾರಿಕವಾಗಿ ಕಾಮರ್ಸ್ ಎಂಟ್ರಿಯನ್ನು ಘೋಷಿಸುವ ನಿರೀಕ್ಷೆ ಇದೆ. ಬಳಕೆದಾರರ ಅನುಭವವು ಉತ್ತಮವಾಗಿರಬೇಕು. ಅದೇ ನಮ್ಮ ಆದ್ಯತೆ ಎಂದು ಕಂಪನಿಯ ಸಹ ಸಂಸ್ಥಾಪಕರಾದ ವೀರೇಂದ್ರ ಗುಪ್ತಾ ಸ್ಪಷ್ಟಪಡಿಸಿದ್ದಾರೆ.