ಬೆಂಗಳೂರು: ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದಾಗುತ್ತದೆ ಎಂದು ಹೇಳಿ ಶ್ರೀಮಂತರನ್ನು, ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರಿನ ಪುಲಕೇಶಿ ನಗರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಾಗರಾಜ್, ಬಾಲಕೃಷ್ಣ, ರಾಜೇಶ್ ಎಂದು ಗುರುತಿಸಲಾಗಿದೆ. ನಕಲಿ ಡೈಮಂಡ್ ನ್ನು ತೋರಿಸಿ ಅಡ್ವಾನ್ಸ್ ಹಣ ಕೊಡಬೇಕು ಎಂದು ಹೇಳಿ ಹಣ ಪಡೆದು ವಂಚಿಸುತ್ತಿದ್ದರು.
ಆರೋಪಿ ನಾಗರಾಜ್ ಫ್ರೆಜರ್ ಟೌನ್ ಬಳಿಯ ಉದ್ಯಮಿಯೊಬ್ಬರಿಗೆ ಪರಿಚಯವಾಗಿ ಪಿತ್ರಾರ್ಜಿತವಾಗಿ ಬಂದಿದ್ದ ಡೈಮಂಡ್ ನೆಕ್ಲೆಸ್ ಇದೆ ಅದನ್ನು ಮಾರಾಟ ಮಾಡಲು ಮುಂದಾಗಿದ್ದೇನೆ. ಮಾರ್ಕೆಟ್ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುತ್ತೇನೆ. ಮನೆಯಲ್ಲಿ ಡೈಮಂಡ್ ಇದ್ದರೆ ಒಳ್ಳೆಯದು ಎಂದು ಹೇಳಿದ್ದ. ಇದನ್ನು ನಂಬಿದ ಉದ್ಯಮಿ 10 ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ಬಳಿಕ 92 ಕ್ಯಾರೆಟ್ ವಜ್ರದ ದೊಡ್ಡ ಹರಳಿದೆ. ಅದರ ಬೆಲೆ ಬರೋಬ್ಬರಿ 25 ಕೋಟಿ ಆಗುತ್ತದೆ ಹಣ ಹೊಂದಿಸಿಕೊಂಡು ಬಂದರೆ ಆ ವಜ್ರದ ಹರಳು ನಿಮ್ಮದಾಗುತ್ತದೆ ಎಂದು ಹೇಳಿದ್ದರು. ಆರಂಭದಲ್ಲಿ ವಜ್ರದ ನೆಕ್ಲೆಸ್ ಅಂದವನು ಬಳಿಕ ವಜ್ರದ ದೊಡ್ದ ಹರಳು ಎಂದು ಹೇಳಲಾರಂಭಿಸಿದ್ದ.
ಅನುಮಾನಗೊಂಡ ಉದ್ಯಮಿ ಪುಲಕೇಶಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.