ಬೆಂಗಳೂರು: ಡೇಟಿಂಗ್ ಆಪ್ ಮೂಲಕ ಯುವತಿಯನ್ನು ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹಿಂದೂ ಯುವಕನ ಹೆಸರಿನಲ್ಲಿ ಡೇಟಿಂಗ್ ಆಪ್ ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಯುವತಿಯನ್ನು ಪರಿಚಯಿಸಿಕೊಂಡು ಮೋಸ ಮಾಡಿದ್ದ. ಆರೋಪಿಯನ್ನು ಮುದಾಸಿರ್ ಎಂದು ಗುರುತಿಸಲಾಗಿದೆ. ಅಲ್ಲದೇ ಅದಾಗಲೇ ಒಂದು ಮದುವೆಯಾಗಿ ಮಕ್ಕಳನ್ನು ಹೊಂದಿದ್ದ ಮುದಾಸಿರ್ ಡೇಟಿಂಗ್ ಆಪ್ ಮೂಲಕ ಯುವತಿಯರನ್ನು ಮೋಸ ಮಾಡುತ್ತಿದ್ದ.
ಅನಿರುದ್ಧ ಎಂಬ ಹೆಸರಿನಲ್ಲಿ ಡೆಟಿಂಗ್ ಆಪ್ ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ ಮುದಾಸಿರ್. ಆಪ್ ನಲ್ಲಿ ಸಂಗಾತಿ ಹುಡುಕುತ್ತಿದ್ದ ಯುವತಿಗೆ ಮೆಸೆಜ್ ಕಳುಹಿಸಿ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದ. ಬಳಿಕ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿ, ತಾಯಿಗೆ ಹುಷಾರಿಲ್ಲ ಎಂದು ಹೇಳಿ ಯುವತಿಯಿಂದಲೇ 1 ಲಕ್ಷ ರೂಪಾಯಿ ಹಣ ಪಡೆದು ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳಿನ ಕಥೆ ಕಟ್ಟಿದ್ದ.
ಅದಾದ ಬಳಿಕ ದುಬೈಗೆ ಹೋಗಿ ಬರುತ್ತೇನೆ ಎಂದವನು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಬಳಿಕ ಯುವತಿಗೆ ಆತನ ಹೆಸರು ಅನಿರುದ್ಧ ಅಲ್ಲ ಮುದಾಸಿರ್ ಎಂಬುದು ಗೊತ್ತಾಗಿದೆ. ಅಲ್ಲದೇ ಆತ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುವ ಸಂಗತಿಯೂ ತಿಳಿದುಬಂದಿದೆ. ಮೋಸದಿಂದ ನೊಂದ ಯುವತಿ ಅಮೃತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುದಾಸಿರ್ ನನ್ನು ಬಂಧಿಸಿದ್ದಾರೆ.