ಬೆಂಗಳೂರು: ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ ಹಿನ್ನೆಲೆಯಲ್ಲಿ ಕಲಬುರ್ಗಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಜನಸಂಕಲ್ಪ ಸಮಾವೇಶ ರದ್ದು ಮಾಡಲಾಗಿದೆ.
ಆಳಂದ ಹಾಗೂ ಚಿತ್ತಾಪುರ ಪಟ್ಟಣದಲ್ಲಿ ಇಂದು ಜನಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು. ಆದರೆ ಆನಂದ್ ಮಾಮನಿ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ಪ್ರವಾಸ ಹಾಗೂ ಸಮಾವೇಶ ರದ್ದು ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚಿಸಿದ್ದಾರೆ.
ಇದೇ ವೇಳೆ ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಡೆಯಬೇಕಿದ್ದ ಕಿತ್ತೂರು ಉತ್ಸವ ಕೂಡ ಮುಂದೂಡಲಾಗಿದೆ. ಇಂದು ಆರಂಭವಾಗಬೇಕಿದ್ದ ಕಿತ್ತೂರು ಉತ್ಸವ ನಾಳೆಗೆ ಮುಂದೂಡಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕಿತ್ತೂರು ಉತ್ಸವ ಅ.23ರಿಂದ 25ರವರೆಗೆ ಆಯೋಜನೆಗೊಂಡಿತ್ತು. ಇದೀಗ ನಾಳೆಯಿಂದ ಕಿತ್ತೂರು ಉತ್ಸವ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.