ಬೆಂಗಳೂರು: ಉಪಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಸಿಂದಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದ ವಿಡಿಯೋಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಪರ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಡಿ.ಕೆ.ಶಿವಕುಮಾರ್ ನಿನ್ನೆ ವಿಡಿಯೋ ಬಿಡುಗಡೆ ಮಾಡಿದ್ದರು. ಒಂದು ವೋಟ್ ಗೆ 10 ಸಾವಿರ ರೂಪಾಯಿನನ್ನು ಹಂಚಲಾಗುತ್ತಿದ್ದು, ಕವರ್ ನಲ್ಲಿ ಹಣ ಹಾಗೂ ರಮೇಶ್ ಬೂಸನೂರು ಭಾವಚಿತ್ರ, ಬಿಜೆಪಿ ಚಿಹ್ನೆಯನ್ನೊಳಗೊಂಡ ಚೀಟಿ ಇಟ್ಟು ಮತದಾರರಿಗೆ ಬಿಜೆಪಿ ಕಾರ್ಯಕರ್ತರು ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಬಿಜೆಪಿ ಹಣ ಹಂಚಿಕೆ ವಿಡಿಯೋ ಹೊಸ ತಿರುವು ಪಡೆದುಕೊಂಡಿದ್ದು, ಇದು ಸಿಂದಗಿ ಬಿಜೆಪಿ ಅಭ್ಯರ್ಥಿ ಪರವಾದ ವಿಡಿಯೋ ಅಲ್ಲ, ಬದಲಾಗಿ ತೆಲಂಗಾಣದ ವಿಡಿಯೋ ಎಂದು ತಿಳಿದುಬಂದಿದೆ.
ತೆಲಂಗಾಣದ ಚುನಾವಣೆಯೊಂದರ ವಿಡಿಯೋ ಇದಾಗಿದ್ದು, ಭಾವಚಿತ್ರದಲ್ಲಿರುವುದು ಈಟಲ ರಾಜೇಂದ್ರ ಅವರ ಫೋಟೋ ಹೊರತು ರಮೇಶ್ ಭೂಸನೂರು ಅವರ ಫೋಟೊ ಅಲ್ಲ ಎಂದು ರಾಜ್ಯ ಬಿಜೆಪಿ ಮೂಲಗಳು ತಿಳಿಸಿವೆ.