ಹುಬ್ಬಳ್ಳಿ: ಬಿಜೆಪಿಯ ಲಿಂಗಾಯಿತ ಡ್ಯಾಮ್ ಒಡೆದು ನೀರು ಹೊರಬರುತ್ತಿದೆ. ಹರಿಯುವ ನೀರು ಕಾಂಗ್ರೆಸ್ ಸಮುದ್ರ ಸೇರಲೇಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಮುದ್ರದ ನೀರು ಉಪ್ಪು. ಆ ನೀರು ಯಾವುದಕ್ಕೂ ಉಪಯೋಗಕ್ಕೆ ಬರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಡಿ.ಕೆ. ಶಿವಕುಮಾರ್ ಲಿಂಗಾಯಿತ ಡ್ಯಾಂ ಒಡೆದಿದೆ. ಕಾಂಗ್ರೆಸ್ ಸಮುದ್ರ ಸೇರಿದೆ ಎಂದಿದ್ದಾರೆ. ಸಮುದ್ರದ ನೀರು ಉಪ್ಪು ಇರುತ್ತದೆ. ಅದು ಉಪಯೋಗಕ್ಕೆ ಬರಲ್ಲ. ಸಮುದ್ರದ ನೀರನ್ನು ಕಾಂಗ್ರೆಸ್ ನವರೇ ಇಟ್ಟುಕೊಳ್ಳಲಿ, ನಮಗೆ ಬೇಡ. ಬಿಜೆಪಿ ಮಲಪ್ರಭಾ, ಕಾವೇರಿ ನದಿಯಂತೆ ಶುದ್ಧ ಹಾಗೂ ಪವಿತ್ರವಾದದ್ದು. ಜನ ಬಿಜೆಪಿಯನ್ನು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಲಿಂಗಾಯಿತರ ಬಗ್ಗೆ ಅನುಕಂಪ ತೋರುತ್ತಿದ್ದಾರೆ. ಇಂದು ರಾಹುಲ್ ಗಾಂಧಿ ಲಿಂಗಾಯಿತ ಸಿಎಂ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಹಿಂದೆ ಕಾಂಗ್ರೆಸ್ ನಾಯಕರು ಲಿಂಗಾಯಿತ ನಾಯಕರೊಂದಿಗೆ ಹೇಗೆ ನಡೆದುಕೊಂಡರು. ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರನ್ನು ಹೇಗೆ ನಡೆಸಿಕೊಂಡರು.. ಇವರ ತುಷ್ಟೀಕರಣ ಜನರಿಗೆ ಅರ್ಥವಾಗುತ್ತೆ ಎಂದು ಕಿಡಿಕಾರಿದರು.