ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸಿಬಿಐ ತನಿಖೆಗೆ ತಡೆ ಕೋರಿ ಡಿ.ಕೆ.ಶಿವಕುಮಾರ್, ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಫೆಬ್ರವರಿ 24ರವರೆಗೆ ತನಿಖೆಗೆ ತಡೆ ನೀಡಿದೆ. ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ ಸಂಬಂಧ ಸಿಬಿಐ ತನಿಖಾಧಿಕಾರಿ ಈವರೆಗೆ ನಡೆಸಿದ ತನಿಖಾ ವರದಿಯನ್ನು ಫೆ.24ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಂತರದ ಕೋರ್ಟ್ ಆದೇಶದ ಬಳಿಕ ನಿರ್ಧಾರ ಮಾಡುವಂತೆ ಹೈಕೋರ್ಟ್ ಸೂಚಿಸಿದೆ. ಈ ಮೂಲಕ ಡಿ.ಕೆ.ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿತ್ತು. ತನಿಖೆಗೆ ತಡೆ ಕೋರಿ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೇಸ್ ನಲ್ಲಿ ಹೆಂಡತಿ, ಮಗಳಿಗೂ ಸಿಬಿಐ ನೋಟೀಸ್ ನೀಡುವ ಮೂಲಕ ತೊಂದರೆ ಕೊಡಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಗೆ ಮಾನಸಿಕ ಒತ್ತಡ ಹೇರಲಾಗುತ್ತಿದೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಉದ್ದೇಶಪೂರ್ವಾಕವಾಗಿ ತೊಂದರೆ ಕೊಡಲಾಗುತ್ತಿದೆ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದ್ದರು. ಇದೀಗ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.