ಬೆಂಗಳೂರು: ಐ ಪಿ ಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಂಘರ್ಷ ತಾರಕಕ್ಕೇರಿರುವ ನಡುವೆಯೇ ಡಿ.ರೂಪಾ ಪರ ನಿಂತಿರುವ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ, ವಕೀಲ ಸೂರ್ಯ ಮುಕುಂದರಾಜ್, ಐ ಎ ಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಬಗ್ಗೆ ಸಿಬಿಐ ನೀಡಿರುವ ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
ಡಿ.ರೂಪಾ ಹಾಗೂ ರೋಹಿಣಿ ನಡುವಿನ ಸಂಘರ್ಷದಲ್ಲಿ ಡಿ.ಕೆ.ರವಿ ಸಾವಿನ ವಿಚಾರ ಪ್ರಸ್ತಾಪವಾಗುತ್ತಿದ್ದು, ಇದೀಗ ಸೂರ್ಯ ಮುಕುಂದ ರಾಜ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಡಿ.ಕೆ.ರವಿ ಸಾವಿನ ಬಗ್ಗೆ ಸಿಬಿಐ ನೀಡಿದ ವರದಿ ಪೋಸ್ಟ್ ಮಾಡಿದ್ದಾರೆ. ಇಂದು ರೂಪಾ ಅವರ ನಡೆ ಪ್ರಶ್ನಿಸುವುವವರು ಸಿಬಿಐ ತನಿಖಾ ವರದಿಯನ್ನು ಓದಬೇಕು. ಡಿ.ಕೆ.ರವಿ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಸಿಬಿಐ ವರದಿಯಲ್ಲಿದೆ ಎಂದಿದ್ದಾರೆ.
ಅಂದು ರೋಹಿಣಿ ಸಿಂಧೂರಿ ಅದೃಷ್ಟ ಚೆನ್ನಾಗಿದ್ದರಿಂದ ಅವರ ಮೇಲೆ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಾಗಿಲ್ಲ. ರವಿ ಸಾವಿನ ನೋವನ್ನು ಅಂದು ರವಿ ಪತ್ನಿ ಕುಸುಮಾ, ಸಿದ್ದರಾಮಯ್ಯ ಸರ್ಕಾರ ಅನುಭವಿಸಬೇಕಾಯಿತು. ಡಿ.ಕೆ.ರವಿ ಸಾವಿಗೆ ರೋಹಿಣಿ ಸಿಂಧೂರಿ ಹಾಗೂ ಆಕೆ ಪತಿ ಸುಧೀರ್ ಕಾರಣ. ಡಿ.ಕೆ.ರವಿ ಹಾಗೂ ರೋಹಿಣಿ ಸಿಂಧೂರಿ ನಡುವಿನ ಎಲ್ಲಾ ಸಂಭಾಷಣೆಗಳು ಸಿಬಿಐ ವರದಿಯಲ್ಲಿದೆ. ಒಬ್ಬ ಅಧಿಕಾರಿ ಸಾವಿನ ಬಳಿಕವೂ ಬದಲಾಗದ ರೋಹಿಣಿ ಸಿಂಧೂರಿ ತನ್ನ ಚೆಲ್ಲಾಟ ಮುಂದುವರೆಸಿದ್ದಾರೆ ಈಗ ಡಿ.ರೂಪಾ ಅದೆಲ್ಲದಕ್ಕೂ ಅಂತ್ಯ ಹಾಡುತ್ತಿದ್ದಾರೆ ಎಂದು ಹೇಳಿದ್ದಾರೆ.