ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ.) ತನ್ನ ಅಂಗ ಸಂಸ್ಥೆಯಾದ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ವಿನ್ಯಾಸಗೊಳಿಸಿರುವ ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಡಿ.ಆರ್.ಡಿ.ಒ. ವಿಮಾನ ಪರೀಕ್ಷಾ ನೆಲೆಯಲ್ಲಿ ಶುಕ್ರವಾರದಂದು ಈ ಹಾರಾಟ ನಡೆಸಿದ್ದು, ಮಾನವ ರಹಿತವಾಗಿ ಯಶಸ್ವಿಯಾಗಿ ಆಗಸಕ್ಕೆ ಹಾರಿದ ವಿಮಾನವು ಅಷ್ಟೇ ನಿಖರವಾಗಿ ನಿಗದಿಪಡಿಸಿದ ಜಾಗದಲ್ಲಿ ಲ್ಯಾಂಡ್ ಆಗಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಈ ಸಾಧನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು ಯುದ್ಧ ವಿಮಾನ ನಿರ್ಮಾಣದಲ್ಲಿ ಸ್ವಾವಲಂಬನೆ ಸಾಧಿಸುವ ಹಾದಿಯಲ್ಲಿ ಇದೊಂದು ಮಹತ್ತರ ಕಾರ್ಯ ಎಂದು ಬಣ್ಣಿಸಿದ್ದಾರೆ.