ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಎ.ರಾಮದಾಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ರಾಮದಾಸ್, ಕೋವಿಡ್ ನಂತಹ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳು ಸಂಘರ್ಷಕ್ಕಿಳಿಯುವುದು ಸರಿಯಲ್ಲ. ಮೈಸೂರಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಐಎಎಸ್ ಅಧಿಕಾರಿಗಳು ಕೇಂದ್ರ ಸರ್ಕಾರದ ಅಡಿ ಬರುತ್ತಾರೆ. ಹಾಗಾಗಿ ಪ್ರಧಾನಿಗೆ ಪತ್ರ ಬರೆದು ತಿಳಿಸಿದ್ದೇನೆ ಎಂದರು.
ಕೊರೊನಾದಂತಹ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಿಲ್ಲೆಯ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳು ಜಟಾಪಟಿ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಸಂಘರ್ಷಗಳು ಗಮನಕ್ಕೆ ಬರುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದೇನೆ. ಮುಖ್ಯಕಾರ್ಯದರ್ಶಿಗಳು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.