ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಸಹ ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿಲ್ಲದ ಕಾರಣ ಅವಕಾಶಗಳಿಂದ ವಂಚಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲು ಮುಂದಾಗಿದೆ.
ಡಿಪ್ಲೋಮೋ ಪರೀಕ್ಷೆಯನ್ನು ವಿದ್ಯಾರ್ಥಿಗಳು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಿಶ್ರಣ ಮಾಡಿ ಬರೆಯಲು ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದ್ದು, ಮುಂಬರುವ ಸೆಮಿಸ್ಟರ್ ಪರೀಕ್ಷೆಯಿಂದಲೇ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಮೌಲ್ಯಮಾಪನ ಮಾಡುವವರಿಗೂ ಸಹ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ತಾಂತ್ರಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ತಿಳಿಸಿದ್ದಾರೆ.
ಭಾಷಾ ಸಮಸ್ಯೆಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಡಿಪ್ಲೋಮಾ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದು, ಈ ಪೈಕಿ ಬಹುತೇಕರು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದರು. ಇವರುಗಳಿಗೆ ಪ್ರತಿಭೆ ಇದ್ದರೂ ಸಹ ಇಂಗ್ಲಿಷ್ ಭಾಷೆ ಕಾರಣಕ್ಕೆ ಶಿಕ್ಷಣದಲ್ಲಿ ಹಿಂದುಳಿಯುತ್ತಿದ್ದರು. ಹೀಗಾಗಿ ಕಾಲೇಜುಗಳಲ್ಲಿ ಬೋಧನೆ ಮಾಡಲು ಸಹ ಕನ್ನಡ – ಇಂಗ್ಲಿಷ್ ಬಳಸಲಾಗುತ್ತಿದ್ದು, ಇದೀಗ ಪರೀಕ್ಷೆಯನ್ನು ಸಹ ಕನ್ನಡ – ಇಂಗ್ಲಿಷ್ ಮಿಶ್ರಣ ಮಾಡಿ ಬರೆಯಲು ಅವಕಾಶ ಕಲ್ಪಿಸಿಕೊಡಲು ಚಿಂತನೆ ನಡೆದಿದೆ.