ಬೆಂಗಳೂರು: ನಾನು ಯಾವುದೇ ಅಕ್ರಮ, ಭ್ರಷ್ಟಾಚಾರದಲ್ಲಿಯೂ ಭಾಗಿಯಾಗಿಲ್ಲ. ನನ್ನ ಜೀವನವೇ ತೆರೆದ ಪುಸ್ತಕ. ನಾನು ಕಳಂಕರಹಿತ ರಾಜಕಾರಣಿ. ನನ್ನ ವಿರುದ್ಧದ ಕಾಂಗ್ರೆಸ್ ಆರೋಪ ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಕೆಪಿಸಿಸಿ ಅಧ್ಯಕ್ಷರ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜೈಲಿಗೆ ಹೋಗಿ ಬಂದ ವ್ಯಕ್ತಿ ನನ್ನ ವಿರುದ್ಧ ನಿರಾಧಾರ ಆರೋಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಆರೋಪ ಮಾಡಲು ಡಿಕೆಶಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಎಲ್ಲೆಡೆ ಸೋತು ಸುಣ್ಣವಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಭಯದಿಂದ ನಮ್ಮ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ದಾಖಲೆ ಸಮೇತ ಆರೋಪ ಮಾಡಿದರೆ ಅರ್ಥವಿದೆ. ದರ್ಶನ್ ಗೌಡ ನಮ್ಮ ಸಂಬಂಧಿಕ, ಮಾಗಡಿಯವರನ್ನು ಪಿ ಎಸ್ ಐ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಮಾಗಡಿಯವರನ್ನು ಆಯ್ಕೆ ಮಾಡಲೇ ಬಾರದೇ? ಡಿ.ಕೆ.ಶಿವಕುಮಾರ್ ಹೇಳಿಕೆಗಳನ್ನು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ದುರಂತ ಎಂದು ಕಿಡಿಕಾರಿದರು.