ಬೆಳಗಾವಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಶಾಸಕ ಜಮೀರ್ ಅಹ್ಮದ್ ಖಾನ್, ನಾನು ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಅಭಿಪ್ರಾಯ ತಿಳಿಸಿದರೆ ತಪ್ಪೇನು ? ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಡಿ.ಕೆ.ಶಿವಕುಮಾರ್ ಅವರು ಹೇಳಿದ್ದು ನನಗೊಬ್ಬನಿಗೆ ಅಲ್ಲ, ಎಲ್ಲರೂ ಮೊದಲು ಪಕ್ಷವನ್ನು ಅಧಿಕಾರಕ್ಕೆ ತನ್ನಿ ನಂತರ ಸಿಎಂ ಯಾರಾಗಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ಹೌದು. ನಮ್ಮದು ಹೈಕಮಾಂಡ್ ಪಕ್ಷ. ಹಾಗಾಗಿ ಸಿಎಂ ಯಾರಾಗಬೇಕು ಎಂಬುದು ಹೈಕಮಾಂಡ್ ನವರೇ ನಿರ್ಧರಿಸುತ್ತಾರೆ. ಆದರೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೇ. ಇದರಲ್ಲಿ ಡಿ.ಕೆ. ಶಿವಕುಮಾರ್ ಸಿಟ್ಟಾದ್ರೆ ನಾನೇನೂ ಮಾಡಕಾಗಲ್ಲ ಎಂದು ಟಾಂಗ್ ನೀಡಿದರು.
ನಾನು ರಾಜ್ಯದ ಹಲವೆಡೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಜನರ ಅಭಿಪ್ರಾಯವೇನು ಎಂಬುದು ಸ್ಪಷ್ಟವಾಗುತ್ತಿದೆ. ಹಾಗಾಗಿ ಜನರ ಅಭಿಪ್ರಾಯ ಹಾಗೂ ನನ್ನ ವೈಯಕ್ತಿಕ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ತೀರ್ಮಾನ ಹೈಕಮಾಂಡ್ ಗೆ ಬಿಟ್ಟದ್ದು, ಜನರಾಗಲಿ, ಶಾಸಕರಾಗಲಿ ಅಭಿಪ್ರಾಯ ತಿಳಿಸುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.
ಸಿಎಂ ಹುದ್ದೆ ರೇಸ್ ಚರ್ಚೆಗೆ ಚಾಲನೆ ಕೊಟ್ಟವರು ಯಾರು ? ಅವರೇ ಚಾಲನೆ ಕೊಟ್ಟದ್ದು, ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ನನಗೂ ಒಂದು ಅವಕಾಶ ಕೊಡಿ ಎಂದು ಹೇಳಿದ್ದಾರೆ. ಅವರೇ ಮಾತನಾಡಿದ ಮೇಲೆ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಇನ್ನು ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮೆಲ್ಲರ ಉದ್ದೇಶ. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಹುದ್ದೆ ವಿಚಾರ. ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುವುದು ಹೊರತು ಡಿಕೆಶಿನೂ ಮಾಡಕಾಗಲ್ಲ, ನಾನೂ ಮಾಡಕಾಗಲ್ಲ ಎಂದು ಹೇಳಿದರು.