ತಮ್ಮ ಸುದ್ದಿಗೋಷ್ಠಿಗೆ ಹಲವು ಪತ್ರಕರ್ತರು ಬಂದಿಲ್ಲವೆಂಬ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೂಂಡಾಗಿರಿ ವರ್ತನೆ ತೋರಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಸುದ್ದಿಗೋಷ್ಠಿ ವೇಳೆ ಯಾವ ಪತ್ರಕರ್ತರು ಬಂದಿಲ್ಲ ಅವರ ಪಟ್ಟಿ ಕೊಡಿ. ಮ್ಯಾನೇಜ್ಮೆಂಟ್ ಜೊತೆ ಮಾತನಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳುವ ಮೂಲಕ ಕೆಲಸದಿಂದ ತೆಗೆಸಿ ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಹೀಗಾಗಿ ತಕ್ಷಣವೇ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ನೀಡಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಶೋಭಾ ಕರಂದ್ಲಾಜೆ, ಹಾಗೆಯೇ ಕಾಂಗ್ರೆಸ್ ಪಕ್ಷ ಸಾಮಾಜಿಕ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಹಳೆಯ ವಿಡಿಯೋ ಒಂದನ್ನು ತೋರಿಸಿ ಬಿಜೆಪಿ ವಾಹನಕ್ಕೆ ಕಲ್ಲು ಹೊಡೆದಿದ್ದಾರೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ತಮ್ಮ ಮನವಿಯಲ್ಲಿ ಹೇಳಿದ್ದಾರೆ.