ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿಗೆ 20 ಕಾಂಗ್ರೆಸ್ ನಾಯಕರನ್ನು ಬೇಕಾದರೂ ಕರೆತರುವ ಶಕ್ತಿಯಿದೆ. ಬಿಜೆಪಿ ಹೈಕಮಾಂಡ್ ಅವರ ಶಕ್ತಿಯನ್ನು ಬಳಸಿಕೊಳ್ಳಲಿ ಎಂದು ಎಂಎಲ್ ಸಿ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಮಾತನಾಡಿದ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿಗೆ 16 ಅಲ್ಲ, 20 ಶಾಸಕರನ್ನು ಕರೆತರುವ ಶಕ್ತಿಯಿದೆ. ರಮೇಶ್ ಆಗಲಿ, ಬಾಲಚಂದ್ರ ಜಾರಕಿಹೊಳಿಯಾಗಲಿ ಯಾವುದೇ ಕೆಲಸ ಮಾಡಬೇಕು ಎಂದು ಪಣ ತೊಟ್ಟರೆ ಮಾಡೇ ಮಾಡ್ತಾರೆ. ಅವರ ಶಕ್ತಿಯನ್ನು ಹೈಕಮಾಂಡ್ ಬಳಸಿಕೊಳ್ಳಲಿ ಎಂದರು.
ಇದೇ ವೇಳೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ರಮೇಶ್ ಜಾರಕಿಹೊಳಿ ತಮ್ಮ ಪರ ನಿಂತಿದ್ದೇ ಕಾರಣ ಎಂಬ ಆರೋಪ ನಿರಾಕರಿಸಿದ ಲಖನ್, ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರಿಬ್ಬರೂ ನನಗೆ ಯಾವುದೇ ಸಹಾಯ ಮಾಡಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ, ಸ್ವತಂತ್ರವಾಗಿ ಆಯ್ಕೆಯಾಗಿದ್ದೇನೆ. ಪಕ್ಷೇತರ ಸದಸ್ಯನಾಗಿಯೇ ಮುಂದುವರೆಯುತ್ತೇನೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಸೋಲಲು ಅಥಣಿ ನಾಯಕರು ಕಾರಣ ಎಂದು ಹೇಳಿದರು.
ಅಥಣಿ ನಾಯಕರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಡಿಕೆಶಿ ಜತೆ ಸೇರಿ ಕುತಂತ್ರ ಮಾಡಿದ್ದಾರೆ. ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕವಟಗಿಮಠ ಸೋಲಿಗೆ ಕಾರಣರಾದರು. ಸವದಿ ಡಿಕೆಶಿ ಜತೆ ನಿರಂತರ ಸಂಪರ್ಕದಲ್ಲಿದ್ದು, ಮುಂದೆ ಅವರು ಕಾಂಗ್ರೆಸ್ ಗೆ ಹೋದರೂ ಹೋಗಬಹುದು ಎಂದು ಆರೋಪಿಸಿದರು.