ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪಸರಿಸಲು ಡಾ.ಶಿವಕುಮಾರ ಸ್ವಾಮೀಜಿ ಶ್ರಮಿಸಿದ್ದರು. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಮರಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಏರ್ಪಡಿಸಲಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ನಡೆದಾಡೋ ದೇವರ ಬಸವ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ಡಾ.ಶಿವಕುಮಾರ ಸ್ವಾಮೀಜಿ 80 ವರ್ಷಗಳ ಕಾಲ ಸಮಾಜಸೇವೆ ಮಾಡಿದ್ದರು. ಉತ್ತರದಲ್ಲಿ ಗಂಗೆಯಾದರೆ ದಕ್ಷಿಣದಲ್ಲಿ ಸಿದ್ಧಗಂಗಾ. ಗಂಗಾನದಿ ಸ್ನಾನದಿಂದ ಪುಣ್ಯ ಸಿಗುತ್ತದೆ. ಸಿದ್ಧಗಂಗಾ ಮಠಕ್ಕೆ ಆಗಮಿಸಿದರೆ ಪುಣ್ಯ ಸಿಗಲಿದೆ ಎಂದು ಹೇಳಿದರು.
ಅನ್ನ, ಅಕ್ಷರ, ಆಶ್ರಯ ನೀಡಿದವರು ಶಿವಕುಮಾರ ಶ್ರೀಗಳು. ಮಠಕ್ಕೆ ಯಾರೇ ಆಗಮಿಸಿದರೂ ಉಪವಾಸ ಹೋಗುವುದಿಲ್ಲ. ಶಿವಕುಮಾರ ಶ್ರೀಗಳು ತ್ರಿವಿಧ ಸಿದ್ಧಾಂತವನ್ನು ಭೂಮಿಗೆ ತಂದವರು. ತಮ್ಮ ಕಾರ್ಯಗಳಿಂದಲೇ ಜಗತ್ತಿಗೆ ಸಂದೇಶ ನೀಡಿದ ಆಧುನಿಕ ಬಸವಣ್ಣ. ನಾನು ಈವರೆಗೆ ಮೂರು ಬಾರಿ ಸಿದ್ಧಗಂಗಾ ಮಠಕ್ಕೆ ಬಂದಿದ್ದೇನೆ. ಪ್ರತಿ ಬಾರಿ ಬಂದಾಗಲೂ ಹೊಸ ಉತ್ಸಾಹದೊಂದಿಗೆ ವಾಪಸ್ ಆಗಿದ್ದೇನೆ. ಇದು ಸಿದ್ಧಗಂಗಾ ಶ್ರೀಗಳ ಪುಣ್ಯ ಭೂಮಿ ಅವರ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ ಎಂದು ತಿಳಿಸಿದರು.