
ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದೆ. ರೂಪಾಯಿ ಮೌಲ್ಯ 9 ಪೈಸೆಗಳಷ್ಟು ಕುಸಿತದೊಂದಿಗೆ 79.90 ಕ್ಕೆ ಬಂದು ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ ಮೌಲ್ಯವನ್ನು ರೂಪಾಯಿ ದಾಖಲಿಸಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ US ಡಾಲರ್ ದೃಢವಾಗಿರುವುದು ಮತ್ತು ಬಂಡವಾಳದ ಹೊರಹರಿವಿನಿಂದಾಗಿ ರೂಪಾಯಿ ಮೌಲ್ಯ ಕುಸಿತ ದಾಖಲಿಸಿದೆ. ಆದ್ರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿನ ಇಳಿಕೆಯು ರೂಪಾಯಿ ನಷ್ಟವನ್ನು ನಿರ್ಬಂಧಿಸಿದೆ ಅಂತಾ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಸ್ಥಳೀಯ ಕರೆನ್ಸಿಯು 79.72ರಲ್ಲಿ ಆರಂಭವಾಯ್ತು. ದಿನದ ವಹಿವಾಟಿನಲ್ಲಿ US ಡಾಲರ್ ಎದುರು 79.71ಕ್ಕೆ ತಲುಪಿತ್ತು. ನಂತರ 79.92 ರ ಕನಿಷ್ಠ ಮೌಲ್ಯವನ್ನು ಸಹ ದಾಖಲಿಸಿದ ರೂಪಾಯಿ, ವಹಿವಾಟು ಅಂತ್ಯಕ್ಕೆ 79.90 ಗೆ ಸ್ಥಿರವಾಗಿದೆ. ಹಿಂದಿನ ದಿನದ ವಹಿವಾಟು ಮುಕ್ತಾಯಕ್ಕಿಂತ 9 ಪೈಸೆ ಕಡಿಮೆಯಾಗಿದೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ಪ್ರಮುಖ ಜಾಗತಿಕ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಲಾಭವನ್ನು ಮುಂದುವರೆಸಿದ್ದರಿಂದ ರೂಪಾಯಿ ಮಂಕಾಗಿದೆ. ಈ ಮಧ್ಯೆ ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 97.38 ಡಾಲರ್‌ಗೆ ಇಳಿಕೆ ಕಂಡಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಕೂಡ 98 ಪಾಯಿಂಟ್‌ಗಳಷ್ಟು ಇಳಿಕೆಯಾಗಿ 53,416.15 ಕ್ಕೆ ಕೊನೆಗೊಂಡಿದೆ. ನಿಫ್ಟಿ ಕೂಡ 28 ಪಾಯಿಂಟ್ ಕುಸಿದು 15,938.65 ಕ್ಕೆ ತಲುಪಿದೆ.